Thursday, 26 August 2021

ವಿಶ್ವದಲ್ಲೇ ಗರಿಷ್ಠ ಸಿಸಿಟಿವಿ ಕಣ್ಗಾವಲು ಇರುವ ನಗರ ಯಾವುದು ಗೊತ್ತೇ?


 ವಿಶ್ವದಲ್ಲೇ ಗರಿಷ್ಠ ಸಿಸಿಟಿವಿ ಕಣ್ಗಾವಲು ಇರುವ ನಗರ ಯಾವುದು ಗೊತ್ತೇ?

ಹೊಸದಿಲ್ಲಿ: ಲಂಡನ್, ಶಾಂಘೈ, ಸಿಂಗಾಪುರ, ನ್ಯೂಯಾರ್ಕ್ ಹಾಗೂ ಬೀಜಿಂಗ್ ನಗರಗಳನ್ನು ಹಿಂದಿಕ್ಕಿದ ದಿಲ್ಲಿ, ಪ್ರತಿ ಚದರ ಮೈಲು ಪ್ರದೇಶದಲ್ಲಿ ಗರಿಷ್ಠ ಸಿಸಿಟಿವಿ ಕ್ಯಾಮರಾಗಳನ್ನು ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಿಲ್ಲಿಯಲ್ಲಿ ಪ್ರತಿ ಚದರ ಮೈಲು ಪ್ರದೇಶದಲ್ಲಿ 1,826.6 ಸಿಸಿಟಿವಿ ಕ್ಯಾಮರಾಗಳಿದ್ದರೆ, ಎರಡನೇ ಸ್ಥಾನದಲ್ಲಿರುವ ಲಂಡನ್‌ನಲ್ಲಿ 1,138.5 ಕ್ಯಾಮರಾಗಳಿವೆ ಎಂದು ಸೈಬರ್ ಭದ್ರತಾ ಸಂಶೋಧನಾ ಸಂಸ್ಥೆಯಾದ ಕಂಪ್ಯಾರಿಟೆಕ್ ಸಂಘಟನೆಯ ಅಂಕಿಅಂಶಗಳಿಂದ ದೃಢಪಟ್ಟಿದೆ. ಫೋರ್ಬ್ಸ್ ಇಂಡಿಯಾ ವರದಿಯ ಪ್ರಕಾರ ಚೆನ್ನೈ ನಗರ 609.9 ಕ್ಯಾಮರಾ ಹೊಂದಿದ್ದು ಮೂರನೇ ಸ್ಥಾನದಲ್ಲಿದ್ದರೆ, 157.4 ಕ್ಯಾಮರಾ ಹೊಂದಿರುವ ಮುಂಬೈ 18ನೇ ಸ್ಥಾನದಲ್ಲಿದೆ.

ಮುಖ್ಯವಾಗಿ ಕಾನೂನು ಜಾರಿ ಏಜೆನ್ಸಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾಗಳ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಕಂಪ್ಯಾರಿಟೆಕ್ ಹೇಳಿದೆ. ಸಿಸಿಟಿವಿ ಕ್ಯಾಮರಾಗಳು ಮತ್ತು ಅಪರಾಧ ಅಥವಾ ಸುರಕ್ಷತೆಗೆ ಇರುವ ಸಾಮ್ಯತೆ ಕಡಿಮೆ ಎಂದು ವರದಿಯಲ್ಲಿ ಹೇಳಲಾಗಿದೆ. 150 ನಗರಗಳ ಪೈಕಿ ದಿಲ್ಲಿ ಅಗ್ರಸ್ಥಾನದಲ್ಲಿರುವುದು ನಗರದ ಹೆಮ್ಮೆಯ ವಿಚಾರ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಅಡೆತಡೆಗಳನ್ನು ಒಡ್ಡಿದ ನಡುವೆಯೂ, ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಗರಿಷ್ಠ ಸಂಖ್ಯೆಯ ಕ್ಯಾಮರಾ ಅಳವಡಿಸಲಾಗಿದೆ ಎಂದು ಎಎಪಿ ಸರ್ಕಾರ ಹೇಳಿದೆ.


SHARE THIS

Author:

0 التعليقات: