Tuesday, 17 August 2021

ಘನಿ ಆಡಳಿತಾವಧಿಗಿಂತ ತಾಲಿಬಾನ್ ಆಡಳಿತ ಉತ್ತಮ : ರಷ್ಯಾ ಪ್ರತಿಕ್ರಿಯೆ

ಘನಿ ಆಡಳಿತಾವಧಿಗಿಂತ ತಾಲಿಬಾನ್ ಆಡಳಿತ ಉತ್ತಮ : ರಷ್ಯಾ ಪ್ರತಿಕ್ರಿಯೆ

ಕಾಬೂಲ್: ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯಗಳನ್ನು ತಾಲಿಬಾನ್ ವಶಪಡಿಸಿಕೊಂಡ ಬೆನ್ನಲ್ಲೇ, ತಾಲಿಬಾನ್ ಆಡಳಿತದಲ್ಲಿ ಕಾಬೂಲ್, ಘನಿ ಆಡಳಿತಾವಧಿಗಿಂತ ಉತ್ತಮವಾಗಿದೆ ಎಂದು ರಷ್ಯಾ ಪ್ರತಿಕ್ರಿಯಿಸಿದೆ.

ಅಫ್ಘಾನಿಸ್ತಾನದಲ್ಲಿ ರಷ್ಯಾ ರಾಯಭಾರಿಯಾಗಿರುವ ಡ್ಮಿಟ್ರಿ ಝಿರ್ನೋವ್ ಈ ಬಗ್ಗೆ ಹೇಳಿಕೆ ನೀಡಿ, ತಾಲಿಬಾನ್ ದೃಷ್ಟಿಕೋನ ಉತ್ತಮ, ಧನಾತ್ಮಕ ಮತ್ತು ವ್ಯಾವಹಾರಿಕವಾಗಿದೆ ಎಂದಿದ್ದಾರೆ. ಇಸ್ಲಾಮಿಕ್ ಸಂಘಟನೆ ಕಾಬೂಲ್ ನಗರವನ್ನು ಮೊದಲ 24 ಗಂಟೆಗಳಲ್ಲಿ ಹಿಂದಿನ ಆಡಳಿತಕ್ಕಿಂತ ಹೆಚ್ಚು ಸುರಕ್ಷಿತವನ್ನಾಗಿ ಮಾಡಿದೆ ಎಂದು ಬಣ್ಣಿಸಿದ್ದಾರೆ.

ಪರಿಸ್ಥಿತಿ ಶಾಂತವಾಗಿದ್ದು, ನಗರದ ಸ್ಥಿತಿ ಉತ್ತಮವಾಗಿದೆ. ಕಾಬೂಲ್ ನಗರದ ಇಂದಿನ ಸ್ಥಿತಿ, ಹಿಂದಿನ ಅಧ್ಯಕ್ಷ ಅಶ್ರಫ್ ಘನಿ ಅವರ ಅಧಿಕಾರಾವಧಿಯಲ್ಲಿ ಇದ್ದುದಕ್ಕಿಂತ ಚೆನ್ನಾಗಿದೆ ಎಂದು ಮಾಸ್ಕೋದ ಎಕೋ ಮಾಸ್ಕ್ವಿ ರೇಡಿಯೊ ಜತೆ ಮಾತನಾಡಿದ ಝಿರ್ನೋವ್ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಅಧಿಕಾರ ತರಗೆಲೆಯಂತೆ ಉದುರಿತು. ಅವ್ಯವಸ್ಥೆ, ಅಧಿಕಾರ ಶೂನ್ಯತೆ, ಲೂಟಿಕೋರರು ಬೀದಿಗೆ ಇಳಿಯುತ್ತಾರೆ ಎಂಬಂಥ ಭಾವನೆ ಇತ್ತು ಎಂದು ಅವರು ಹೇಳಿದ್ದಾರೆ. ರವಿವಾರ ತಾಲಿಬಾನ್, ಮಿಂಚಿನ ದಾಳಿಯಲ್ಲಿ ಕಾಬೂಲ್ ನಗರವನ್ನು ವಶಪಡಿಸಿಕೊಳ್ಳುತ್ತಿದ್ದಂತೇ, ಘನಿ ಪಲಾಯನ ಮಾಡಿದ್ದರು. ಸದ್ಯಕ್ಕೆ ಅವರ ಚಲನ ವಲನಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಘನಿ ನಾಲ್ಕು ಕಾರು ಮತ್ತು ಹೆಲಿಕಾಪ್ಟರ್ ಗಳಲ್ಲಿ ಭರ್ತಿ ನಗದು ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ರಷ್ಯಾ ದೂತಾವಾಸ ಹೇಳಿಕೆ ನೀಡಿದ್ದಾಗಿ ಆರ್ಐಎ ನೊವೊಸ್ತಿ ಸುದ್ದಿಸಂಸ್ಥೆ ವರದಿ ಮಾಡಿದೆ.SHARE THIS

Author:

0 التعليقات: