Tuesday, 17 August 2021

ಅಫ್ಘಾನ್ ನಲ್ಲಿ ಅವ್ಯವಸ್ಥೆಗೆ ಅಮೆರಿಕ ಕಾರಣ: ಚೀನಾ ಆರೋಪ


ಅಫ್ಘಾನ್ ನಲ್ಲಿ ಅವ್ಯವಸ್ಥೆಗೆ ಅಮೆರಿಕ ಕಾರಣ: ಚೀನಾ ಆರೋಪ

ಬೀಜಿಂಗ್, ಆ.17: ಅಫ್ಘಾನಿಸ್ತಾನದಲ್ಲಿ ವ್ಯಾಪಕ ಅವ್ಯವಸ್ಥೆ, ಅರಾಜಕತೆ ನೆಲೆಸಲು ಅಮೆರಿಕ ಕಾರಣವಾಗಿದೆ ಎಂದು ಚೀನಾ ಮಂಗಳವಾರ ಆರೋಪಿಸಿದೆ. ವಿನಾಶ ಕಾರ್ಯದಲ್ಲಿ ಮಾತ್ರ ಅಮೆರಿಕದ ಬಲ ಮತ್ತು ಪಾತ್ರದ ಪ್ರದರ್ಶನವಾಗುತ್ತದೆ ಹೊರತು ರಚನಾತ್ಮಕ ಉಪಕ್ರಮಗಳಲ್ಲಿ ಅಲ್ಲ ಎಂಬುದು ಅಫ್ಗಾನ್ ನ ವಿಷಯದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಅಫ್ಗಾನ್ನಲ್ಲಿ ವ್ಯಾಪಕ ಅರಾಜಕತೆ, ವಿಭಜನೆ ಮತ್ತು ಸರ್ವನಾಶಗೊಂಡ ಕುಟುಂಬಗಳ ಪರಿಸ್ಥಿತಿಗೆ ಅಮೆರಿಕ ಕಾರಣವಾಗಿದೆ ಎಂದು ಚೀನಾ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಹುವ ಚುನ್ಯಿಂಗ್ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

  ಅಫ್ಘಾನ್ ನಿಂದ ಅಮೆರಿಕದ ಸೇನಾಪಡೆ ವಾಪಸಾತಿ ನಿರ್ಧಾರ ಹೊರಬೀಳುತ್ತಿದ್ದಂತೆಯೇ, ತಾಲಿಬಾನ್ನೊಂದಿಗೆ ಸಹಕಾರ ಸಂಬಂಧಕ್ಕೆ ಸಿದ್ಧ ಎಂಬ ಸಂದೇಶವನ್ನು ಚೀನಾ ರವಾನಿಸಿತ್ತು. ಅಫ್ಘಾನ್ನೊಂದಿಗೆ ಚೀನಾ ಸುಮಾರು 76 ಕಿ.ಮೀ ಗಡಿಯನ್ನು ಹಂಚಿಕೊಂಡಿದ್ದು, ಗಡಿಭಾಗದಲ್ಲಿ ಉಯ್ಗರ್ ಸಮುದಾಯದ ಪ್ರತ್ಯೇಕತಾವಾದಿಗಳ ಕೃತ್ಯ ಹೆಚ್ಚುವ ಬಗ್ಗೆ ಚೀನಾ ಆತಂಕಿತವಾಗಿದೆ. ಆದರೆ ಕಳೆದ ತಿಂಗಳು ಚೀನಾದ ವಿದೇಶ ಸಚಿವರನ್ನು ಭೇಟಿಯಾಗಿದ್ದ ತಾಲಿಬಾನ್ನ ಉನ್ನತ ಮಟ್ಟದ ನಿಯೋಗ, ಚೀನಾ ವಿರೋಧಿ ಕೃತ್ಯಗಳಿಗೆ ಅಫ್ಘಾನ್ ನಲ್ಲಿ ನೆಲೆ ಒದಗಿಸುವುದಿಲ್ಲ ಎಂದು ಭರವಸೆ ನೀಡಿದ್ದರು.

ತಾಲಿಬಾನ್ ಗೆ ತಲೆಬಾಗುವುದಿಲ್ಲ: ಅಫ್ಘಾನ್ ಮಾಜಿ ಉಪಾಧ್ಯಕ್ಷರ ಪ್ರತಿಜ್ಞೆ

ನನ್ನ ಮಾತನ್ನು ಕೇಳುವ, ನನ್ನ ಮೇಲೆ ವಿಶ್ವಾಸ ಇರಿಸಿರುವ ಮಿಲಿಯಾಂತರ ಜನರನ್ನು ನಾನು ನಿರಾಶೆಗೊಳಿಸುವುದಿಲ್ಲ. ತಾಲಿಬಾನ್ ನ ಆಶ್ರಯದಡಿ ನಾನೆಂದೂ ಬದುಕುವುದಿಲ್ಲ. ತಾಲಿಬಾನ್ ಗೆ ತಲೆಬಾಗುವ ಮಾತೇ ಇಲ್ಲ ಎಂದು ಅಫ್ಘಾನ್ ನ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಟ್ವೀಟ್ ಮಾಡುವ ಮೂಲಕ, ತಾಲಿಬಾನ್ ಗಳ ವಿರುದ್ಧ ಹೊಸ ಯುದ್ಧ ಆರಂಭವಾಗುವ ಸಂಕೇತ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಇನ್ನೂ ತಾಲಿಬಾನ್ ಗಳ ವಶಕ್ಕೆ ಬಾರದಿರುವ ಕಾಬೂಲ್ ನ ಈಶಾನ್ಯದಲ್ಲಿರುವ ಹಿಂದುಕುಶ್ ಪ್ರಾಂತದ ಪಂಜ್ಶಿರ್ ಕಣಿವೆಯಲ್ಲಿ ಸಲೇಹ್ ಭೂಗತರಾಗಿರುವುದಾಗಿ ಊಹಿಸಲಾಗಿದೆ. ಇವರೊಂದಿಗೆ ತಾಲಿಬಾನ್ ವಿರೋಧಿ ಹೋರಾಟಗಾರರ ತಂಡದ ಮುಖಂಡ ಅಹ್ಮದ್ ಶಾ ಮಸೂದ್ನ ಪುತ್ರ ಇದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ಸಾಕಷ್ಟು ಬಲಿಷ್ಟ ಹೋರಾಟಗಾರರ ಪಡೆಯೊಂದಿದ್ದು, ಮುಂದಿನ ದಿನಗಳಲ್ಲಿ ತಾಲಿಬಾನ್ಗಳ ವಿರುದ್ಧ ಹೊಂಚುದಾಳಿ(ಗೆರಿಲ್ಲಾ ಅಭಿಯಾನ)ಯ ಮೂಲಕ ಸಂಘರ್ಷವನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಕೃತಿದತ್ತ ರಕ್ಷಣಾ ಗೋಡೆಯನ್ನು ಹೊಂದಿರುವ ಪಂಜ್ಶಿರ್ ಕಣಿವೆ 1990ರ ಅಂತರ್ಯುದ್ಧದ ಸಂದರ್ಭದಲ್ಲೂ ತಾಲಿಬಾನ್ ಕೈವಶವಾಗಿರಲಿಲ್ಲ. ಇದಕ್ಕೂ ಮುನ್ನ ಸೋವಿಯಟ್ ಯೂನಿಯನ್ನ ಆಡಳಿತಾವಧಿಯಲ್ಲೂ ಈ ಪ್ರಾಂತ ಸೋವಿಯಟ್ ಮಿತ್ರಪಡೆಗಳಿಗೆ ಕಬ್ಬಿಣದ ಕಡಲೆಯಾಗಿಯೇ ಉಳಿದಿತ್ತು. ತಾಲಿಬಾನ್ಗಳು ಪಂಜಿಶಿರ್ ಪ್ರವೇಶಿಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಮತ್ತು ನಮ್ಮೆಲ್ಲಾ ಶಕ್ತಿ ಬಳಸಿ ಅವರನ್ನು ಹಿಮ್ಮೆಟ್ಟಿಸಲಿದ್ದೇವೆ ಎಂದು ತಂಡದ ಓರ್ವ ಸದಸ್ಯ ಹೇಳಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

1990ರ ದಶಕದಲ್ಲಿ ಗೆರಿಲ್ಲಾ ಪಡೆಯ ಕಮಾಂಡರ್ ಮಸೂದ್ ಜತೆಗೂಡಿ ಹೋರಾಟ ನಡೆಸಿದ್ದ ಸಲೇಹ್ ಬಳಿಕ ದೇಶದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. 1996ರಲ್ಲಿ ಅಫ್ಘಾನ್ನ ಮೇಲೆ ತಾಲಿಬಾನ್ಗಳು ನಿಯಂತ್ರಣ ಸಾಧಿಸಿದಾಗ ಅವರು ಪಲಾಯನ ಮಾಡಿದ್ದರು. ಸಲೇಹ್ ರನ್ನು ಹೆಡೆಮುರಿ ಕಟ್ಟಲು ಸಾಧ್ಯವಾಗದ ಆಕ್ರೋಶದಲ್ಲಿ ತಾಲಿಬಾನ್ಗಳು ಅವರ ಸಹೋದರಿಗೆ ಚಿತ್ರಹಿಂಸೆ ನೀಡಿದ್ದರು. 1996ರ ಬಳಿಕ ತಾಲಿಬಾನ್ ಗಳ ಕುರಿತ ತನ್ನ ಅಭಿಪ್ರಾಯ ಬದಲಾಯಿತು ಎಂದು ಸಲೇಹ್ ಹೇಳಿದ್ದರು.

ತಾಲಿಬಾನ್ ನಿಯಂತ್ರಣದ ಅಫ್ಘಾನ್ನೊಂದಿಗೆ ಚೀನಾವು ಮಿತೃತ್ವ ಮತ್ತು ಸಹಕಾರಿ ಸಂಬಂಧವನ್ನು ಮುಂದುವರಿಸಲಿದೆ ಎಂದು ಸೋಮವಾರ ಹುವ ಚುನ್ಯಿಂಗ್ ಹೇಳಿಕೆ ನೀಡಿದ್ದರು.


 SHARE THIS

Author:

0 التعليقات: