Sunday, 8 August 2021

ಕೇರಳದಲ್ಲಿ ಇಂದಿನಿಂದ ಸಾಮೂಹಿಕ ಲಸಿಕೆ ಅಭಿಯಾನ


 ಕೇರಳದಲ್ಲಿ ಇಂದಿನಿಂದ ಸಾಮೂಹಿಕ ಲಸಿಕೆ ಅಭಿಯಾನ

ತಿರುವನಂತಪುರ : ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಸಾಮೂಹಿಕ ಲಸಿಕೆ ಅಭಿಯಾನ ಹಮ್ಮಿಕೊಳ್ಳಲು ಕೇರಳ ಸರ್ಕಾರ ನಿರ್ಧರಿಸಿದೆ. ಈ ತಿಂಗಳ 31ರವರೆಗೆ ಅಭಿಯಾನ ನಡೆಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಪದವಿ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆದ್ಯತೆ ನೀಡಲಾಗುವುದು. ಆಗಸ್ಟ್ 15ರೊಳಗೆ ಎಲ್ಲ ಹಿರಿಯ ನಾಗರಿಕರಿಗೆ ಲಸಿಕೆಯ ಮೊದಲ ಡೋಸ್ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಅಸ್ವಸ್ಥತೆ ಹೊಂದಿರುವವರಿಗೆ ಮನೆಗಳಲ್ಲೇ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಖಾಸಗಿ ವಲಯಕ್ಕೂ ಹೆಚ್ಚು ಲಸಿಕೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ 20 ಲಕ್ಷ ಲಸಿಕೆ ಡೋಸ್‌ಗಳನ್ನು ಖರೀದಿಸಿ ಖಾಸಗಿ ಆಸ್ಪತ್ರೆಗಳಿಗೆ ಇದೇ ದರದಲ್ಲಿ ನೀಡಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಸಾಧ್ಯವಾದಷ್ಟೂ ಹೆಚ್ಚು ಜನರಿಗೆ ಲಸಿಕೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ವಾಣಿಜ್ಯ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಸ್ಥಳೀಯರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 1.5 ಕೋಟಿ ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಇದು ಒಟ್ಟು ಜನತೆಯ ಶೇಕಡ 42.82 ರಷ್ಟಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಕಳೆದ ವಾರ ಹೇಳಿಕೆ ನೀಡಿದ್ದರು.


SHARE THIS

Author:

0 التعليقات: