ಕೇಂದ್ರ ಸಚಿವ ಭಗವಂತ ಖೂಬಾ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ
ಬೆಂಗಳೂರು : ಜನಾಶೀರ್ವಾದ ಯಾತ್ರೆಯ ಹೆಸರಿನಲ್ಲಿ ನಡೆಸಿರುವ ಕಾನೂನು ಉಲ್ಲಂಘನೆ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿರುವ ಪ್ರಕರಣದಲ್ಲಿ ಕೂಡಲೇ ಕೇಂದ್ರ ಸಚಿವ ಸಂಪುಟದಿಂದ ಭಗವಂತ ಖೂಬಾರನ್ನು ವಜಾಗೊಳಿಸಿ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರನ್ನೂ ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳೇ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕರೋನ ನಿಯಮ ಪಾಲನೆಯನ್ನು ಗಾಳಿಗೆ ತೂರುತ್ತಿದ್ದಾರೆ . ಪೊಲೀಸ್ ಇಲಾಖೆಯಂತೂ ಕಣ್ಣುಮುಚ್ಚಿ ಕೂತಿದೆ , ರಾಜ್ಯ ಸರ್ಕಾರದ ಪರವಾಗಿ ಪೋಲಿಸರು ವರ್ತಿಸುತ್ತಿದ್ದಾರೆ. ನೀತಿ ನಿಯಮಗಳನ್ನು ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ವಿರೋಧಪಕ್ಷಗಳನ್ನು ಗುರಿಯಾಗಿಸಿ ಪೋಲಿಸ್ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಕೂಡಲೇ ಪೊಲೀಸ್ ಇಲಾಖೆ ಪಕ್ಷಪಾತ ಧೋರಣೆಯನ್ನು ಕೈ ಬಿಟ್ಟು ಯಾರೇ ನಿಯಮ ಉಲ್ಲಂಘಿಸಿದ್ದರೂ ಹಾಗೂ ಇಂತಹ ಭಯದ ವಾತಾವರಣ ಸೃಷ್ಟಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದರು.
ಗಾಳಿಯಲ್ಲಿ ಗುಂಡು ಹಾರಿಸಲು ಉತ್ತೇಜನ ನೀಡಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ನನ್ನು ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ರನ್ನು ಕೂಡಲೇ ಬಂಧಿಸಬೇಕು ಹಾಗೂ ಕ್ರಮ ಕೈಗೊಳ್ಳದೇ ಹೋದರೆ ರಾಜ್ಯದ ಪೊಲೀಸರಿಗೆ ಇದು ಕಪ್ಪುಚುಕ್ಕೆ ಎಂಬುದನ್ನು ಪೊಲೀಸ್ ಇಲಾಖೆ ಅರ್ಥೈಸಿಕೊಳ್ಳಬೇಕು ಎಂದರು.
ಗಾಳಿಯಲ್ಲಿ ಗುಂಡು ಹಾರಿಸಿರುವುದನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ಭಗವಂತ್ ಖೂಬಾ ಕರ್ನಾಟಕ ಶಾಂತಿಪ್ರಿಯ ನಾಡು ಇಲ್ಲಿ ತಾಲಿಬಾನ್ ಸಂಸ್ಕೃತಿ ನಡೆಯುವುದಿಲ್ಲ. ಇದಕ್ಕೆ ಕರ್ನಾಟಕದ ಜನ ಅವಕಾಶ ನೀಡುವುದಿಲ್ಲ. ಈ ಮೂಲಕ ಎಚ್ಚರಿಸುತ್ತಿದ್ದೇವೆ ಕೂಡಲೇ ರಾಜಿನಾಮೆ ಕೊಟ್ಟು ತೊಲಗಬೇಕು ಎಂದು ಆಗ್ರಹಿಸುತ್ತಾ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದ ಮಿತ್ರರು ಯಾವ ಮಟ್ಟಕ್ಕೆ ಸ್ವಾಗತವನ್ನು ಬಯಸಿದ್ದಾರೆ ಎಂಬುದನ್ನು ಗಮನಿಸಿದರೆ ಮೋದಿ ಅವರಿಗೆ ನಮ್ಮ ದೇಶದ ಸಂಸ್ಕೃತಿಯನ್ನು ಕೇಂದ್ರ ಸಚಿವರು ತಾಲಿಬಾನ್ ಸಂಸ್ಕೃತಿಯತ್ತ ಕೊಂಡೊಯ್ಯತ್ತಿದ್ದಾರೆ ಎಂಬುದು ತಿಳಿಯುತ್ತಿದೆ. ಕೂಡಲೇ ಇಂಥವರನ್ನು ಸಚಿವ ಸಂಪುಟದಿಂದ ಪ್ರಧಾನಿ ಮೋದಿ ವಜಾಗೊಳಿಸಲೇಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಭಗವಂತ ಖೂಬಾರ ವರ್ತನೆಯನ್ನು ಖಂಡಿಸಿ ಪ್ರತಿಕೃತಿ ದಹಿಸಲಾಯಿತು. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ನಡೆಸಿದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ಮನೋಹರ್, ಜಿ ಜನಾರ್ದನ್, ಎ ಆನಂದ್, ಎಂ ಎ ಸಲೀಂ, ಜಯಸಿಂಹ ಪ್ರಕಾಶ್ ಪುಟ್ಟರಾಜು, ಮಹೇಶ್, ಚಂದ್ರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
0 التعليقات: