Wednesday, 11 August 2021

ತಾಲಿಬಾನ್‌ ಕೈ ಸೇರಿದ ಭಾರತದ ಹೆಲಿಕಾಪ್ಟರ್‌

ತಾಲಿಬಾನ್‌ ಕೈ ಸೇರಿದ ಭಾರತದ ಹೆಲಿಕಾಪ್ಟರ್‌

ನವದೆಹಲಿ: ಅಫ್ಗಾನಿಸ್ತಾನಕ್ಕೆ ಭಾರತ ಸರ್ಕಾರವು 2019ರಲ್ಲಿ ಉಡುಗೊರೆಯಾಗಿ ನೀಡಿದ್ದ ಎಂಐ - 24ವಿ ಕದನ ಹೆಲಿಕಾಪ್ಟರ್‌ ಈಗ ತಾಲಿಬಾನ್ ಉಗ್ರರ ವಶವಾಗಿದೆ. ಉತ್ತರ ಅಫ್ಗಾನಿಸ್ತಾನದ ಕುಂದುಜ್ ವಿಮಾನ ನಿಲ್ದಾಣವನ್ನು ತಾಲಿಬಾನ್ ಉಗ್ರರು ಬುಧವಾರ ವಶಕ್ಕೆ ಪಡೆದುಕೊಂಡಿದ್ದು, ಅಲ್ಲಿದ್ದ ಹೆಲಿಕಾಪ್ಟರ್‌ ಅನ್ನೂ ಅವರು ವಶಕ್ಕೆ ಪಡೆದಿದ್ದಾರೆ.

ಭಾರತ ಸರ್ಕಾರವು 2019ರಲ್ಲಿ ಅಫ್ಗಾನಿಸ್ತಾನ ವಾಯುಪಡೆಗೆ ನಾಲ್ಕು ಎಂಐ-24ವಿ ಹೆಲಿಕಾಪ್ಟರ್‌ಗಳನ್ನು ಉಡುಗೊರೆಯಾಗಿ ನೀಡಿತ್ತು. 2015 ಮತ್ತು 2016ರಲ್ಲಿ ನೀಡಿದ್ದ ಕದನ ಹೆಲಿಕಾಪ್ಟರ್‌ಗಳ ಬದಲಿಗೆ ನಾಲ್ಕು ಎಂಐ-24ವಿ ಹೆಲಿಕಾಪ್ಟರ್‌ಗಳನ್ನು ನೀಡಿತ್ತು. ನಾಲ್ಕರಲ್ಲಿ ಒಂದು ಹೆಲಿಕಾಪ್ಟರ್ ಈಗ ತಾಲಿಬಾನ್ ಉಗ್ರರ ವಶವಾಗಿದೆ.

ತಾಲಿಬಾನ್ ಉಗ್ರರು ಭಾನುವಾರ ಕುಂದುಜ್ ರಾಜಧಾನಿ ಪ್ರದೇಶವನ್ನು ವಶಕ್ಕೆ ಪಡೆದಿದ್ದರು. ಉಗ್ರರ ವಿರುದ್ಧ ಸೈನಿಕರು ಹೋರಾಡಿದರೂ, ಬುಧವಾರ ಮಧ್ಯಾಹ್ನದ ವೇಳೆಗೆ ಇಡೀ ನಗರವನ್ನು ಉಗ್ರರು ವಶಕ್ಕೆ ಪಡೆದರು. ವಿಮಾನ ನಿಲ್ದಾಣದಲ್ಲಿದ್ದ ಸೈನಿಕರು ಉಗ್ರರಿಗೆ ಶರಣಾಗಿದ್ದಾರೆ. ನಂತರ ತಮ್ಮ ಶಸ್ತ್ರಾಸ್ತ್ರ, ಸೇನಾ ವಾಹನಗಳು ಮತ್ತು ಸಲಕರಣೆಗಳನ್ನು ಉಗ್ರರ ವಶಕ್ಕೆ ನೀಡಿದ್ದಾರೆ. ನಂತರ ಅಲ್ಲಿಂದ ತೆರಳಿದ್ದಾರೆ.

ಉಗ್ರರು ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆಯುವ ವಿಡಿಯೊವನ್ನು ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್‌ನ ಜೋಸೆಫ್‌ ಡೆಂಪ್ಸಿ ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ ಹಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೊದಲ್ಲಿ ಎಂಐ-24ವಿ ಹೆಲಿಕಾಪ್ಟರ್‌ನ ದೃಶ್ಯವೂ ಇದೆ. ಹೆಲಿಕಾಪ್ಟರ್‌ನ ಚಿತ್ರವೂ ಇದೆ. ಹೆಲಿಕಾಪ್ಟರ್‌ನ ರೋಟರ್‌ಗಳನ್ನು ಬಿಚ್ಚಿಡಲಾಗಿದೆ. 'ಹೆಲಿಕಾಪ್ಟರ್ ಅನ್ನು ಹಾರಾಟ ನಡೆಸಲು ಬರದೇ ಇರುವ ಕಾರಣ, ಉಗ್ರರು ಅದರ ಬಿಡಿಭಾಗಗಳನ್ನು ಬಿಚ್ಚಿಟ್ಟಿರಬಹುದು' ಎಂದು ಡೆಂಪ್ಸಿ ಅವರು ಟ್ವೀಟ್ ಮಾಡಿದ್ದಾರೆ.

ಕುಂದುಜ್ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಾಗ ಯಾವೆಲ್ಲಾ ವಸ್ತುಗಳು ದೊರೆತವು ಎಂಬುದರ ಬಗ್ಗೆ ತಾಲಿಬಾನ್ ಮಾಹಿತಿ ನೀಡಿದೆ. ಶಸ್ತ್ರಾಸ್ತ್ರ, ಸೇನಾ ಸಲಕರಣೆಗಳು ಮತ್ತು ವಾಹನಗಳ ಮಾಹಿತಿಯನ್ನು ತಾಲಿಬಾನ್‌ ಉಗ್ರರು ನೀಡಿದ್ದಾರೆ. ಭಾರತವು ಉಡುಗೊರೆಯಾಗಿ ನೀಡಿದ್ದ ಎಂಐ-24ವಿ ಹೆಲಿಕಾಪ್ಟರ್‌ನ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೆಲಿಕಾಪ್ಟರ್‌ನ ಚಿತ್ರವನ್ನು ಬಿಡುಗಡೆ ಮಾಡಿದ್ದಾನೆ.

ತಾಲಿಬಾನಿಗಳ ಬಂಕರ್‌ ಮೇಲೆ ಜುಲೈ 31ರಂದು ದಾಳಿ ನಡೆಸಲು ಅಫ್ಗನ್ ವಾಯುಪಡೆ ಈ ಹೆಲಿಕಾಪ್ಟರ್‌ ಅನ್ನು ಬಳಸಿಕೊಂಡಿತ್ತು ಎಂದು ಮೂಲಗಳು ಹೇಳಿವೆ.

ಅಫ್ಗಾನಿಸ್ತಾನದ ವಿವಿಧೆಡೆ ಸೇವೆಯಲ್ಲಿದ್ದ 50 ಭಾರತೀಯ ಅಧಿಕಾರಿಗಳು ಮತ್ತು ನಾಗರಿಕರನ್ನು ಭಾರತ ಸರ್ಕಾರವು ಬುಧವಾರ ಸುರಕ್ಷಿತವಾಗಿ ತೆರವು ಮಾಡಿದೆ. ವಿಶೇಷ ವಿಮಾನದ ಮೂಲಕ ಅವರನ್ನು ಬುಧವಾರ ಬೆಳಗಿನ ಜಾವ ದೆಹಲಿ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಬರಲಾಗಿದೆ.SHARE THIS

Author:

0 التعليقات: