Wednesday, 11 August 2021

ಅಫ್ಘಾನಿಸ್ತಾನದ 8ನೇ ನಗರ ತಾಲಿಬಾನ್ ವಶಕ್ಕೆ, ಸೈನಿಕರು, ಪೊಲೀಸರು ಉಗ್ರರಿಗೆ ಶರಣು!


ಅಫ್ಘಾನಿಸ್ತಾನದ 8ನೇ ನಗರ ತಾಲಿಬಾನ್ ವಶಕ್ಕೆ, 
ಸೈನಿಕರು, ಪೊಲೀಸರು ಉಗ್ರರಿಗೆ ಶರಣು!

ಕಾಬೂಲ್; ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರು ಬುಧವಾರ(ಆಗಸ್ಟ್ 11) ಉತ್ತರ ಅಫ್ಘಾನಿಸ್ತಾನದ ಮತ್ತೊಂದು ಪ್ರಾಂತೀಯ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ. ಇದರೊಂದಿಗೆ ಕಳೆದ ಆರು ದಿನಗಳಲ್ಲಿ ಎಂಟು ನಗರಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವುದಾಗಿ ಹೇಳಿದೆ.

ಅಮೆರಿಕ ನೇತೃತ್ವದ ವಿದೇಶಿ ಸೈನಿಕರನ್ನು ವಾಪಸ್ ಕರೆಯಿಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಜನರನ್ನು ಬಲವಂತವಾಗಿ ನಗರದಿಂದ ಹೊರಕಳುಹಿಸುತ್ತಿರುವುದಾಗಿ ವರದಿ ವಿವರಿಸಿದೆ.

ಅಫ್ಘಾನ್ ಈಶಾನ್ಯ ಪ್ರಾಂತ್ಯದ ಬಡಾಕ್ಷನ್ ನಗರ ಫೈಜಾಬಾದ್ ಅನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಿದೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಗನಿ ಮಝರ್ ಎ ಶರೀಫ್ ಗೆ ಬಂದಿಳಿಯುತ್ತಿದ್ದಂತೆಯೇ ಉತ್ತರದ ಅತೀ ದೊಡ್ಡ ನಗರದ ಗಡಿಯನ್ನು ತಾಲಿಬಾನ್ ಮುಚ್ಚಿರುವುದಾಗಿ ವರದಿ ತಿಳಿಸಿದೆ.

ತಾಲಿಬಾನ್ ಉಗ್ರರಿಗೆ ಶರಣಾದ ಸೈನಿಕರು:

ಉತ್ತರದ ನಗರವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆಯೇ ಕುಂದಝ್ ಹೊರವಲಯದ ವಿಮಾನ ನಿಲ್ದಾಣದ ಸಮೀಪ ನೂರಾರು ಅಫ್ಘಾನ್ ಸೈನಿಕರು ಉಗ್ರರಿಗೆ ಶರಣಾಗಿರುವುದಾಗಿ ಸ್ಥಳೀಯ ಸಚಿವ ಎಎಫ್ ಪಿ ನ್ಯೂಸ್ ಏಜೆನ್ಸಿಗೆ ತಿಳಿಸಿರುವುದಾಗಿ ವರದಿ ಮಾಡಿದೆ.

ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ನಡೆಸಲಾಗದೇ ಸೈನಿಕರು, ಪೊಲೀಸರು ತಮ್ಮ ಎಲ್ಲಾ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿರುವುದಾಗಿ ಕುಂದಝ್ ಪ್ರಾಂತ್ಯದ ಕೌನ್ಸಿಲ್ ಸದಸ್ಯ ಅಮ್ರುದ್ದೀನ್ ವಾಲಿ ವಿವರಿಸಿದ್ದಾರೆ.

ಅಫ್ಘಾನಿಸ್ತಾನದ ಪ್ರಾಂತೀಯ ನಗರಗಳಾದ ಫೈಜಾಬಾದ್, ಫರಾಹ್, ಪುಲ್ ಎ ಖುಮ್ರಿ, ಸಾರ್ ಎ ಪುಲ್, ಶೆಬರ್ಗಾನ್, ಅಯ್ಬಾಕ್, ಕುಂದಝ್, ತಾಲುಖಾನ್ ಮತ್ತು ಝರಾಂಜ್ ಅನ್ನು ತಾಲಿಬಾನ್ ಉಗ್ರರು ವಶಕ್ಕೆ ತೆಗೆದುಕೊಂಡಿರುವುದಾಗಿ ಅಲ್ ಜಝೀರಾ ವರದಿ ತಿಳಿಸಿದೆ.SHARE THIS

Author:

0 التعليقات: