Tuesday, 31 August 2021

ತೆಲಂಗಾಣ: ಪ್ರವಾಹದಲ್ಲಿ 7 ಮಂದಿ ಸಾವು


 ತೆಲಂಗಾಣ: ಪ್ರವಾಹದಲ್ಲಿ 7 ಮಂದಿ ಸಾವು

ಹೈದರಾಬಾದ್‌: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ನವ ವಿವಾಹಿತೆ ಸೇರಿದಂತೆ ಕನಿಷ್ಠ ಏಳು ಮಂದಿ ಕೊಚ್ಚಿ ಹೋಗಿದ್ದಾರೆ.

ವಿಕಾರಾಬಾದ್‌ ಜಿಲ್ಲೆಯಲ್ಲಿ ಮದುವೆ ಮುಗಿಸಿಕೊಂಡು ವಧು-ವರ ಹಾಗೂ ಅವರ ಸಂಬಂಧಿಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರವಾಹದ ರಭಸದಲ್ಲಿ ಸಿಲುಕಿದ್ದಾರೆ. ವಧು ಪ್ರವಾಲಿಕಾ ಮತ್ತು ವರ ನವಾಜ್‌ ರೆಡ್ಡಿ ಜೊತೆಗೆ ಇತರೆ ನಾಲ್ಕು ಜನ ಪ್ರಯಾಣಿಸುತ್ತಿದ್ದರು. ವಧು, ಆಕೆಯ ಅತ್ತಿಗೆ ಶ್ವೇತಾ ಮತ್ತು ಅವರ ಎಂಟು ವರ್ಷ ವಯಸ್ಸಿನ ಮಗ ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆ ಸೋಮವಾರ ವರದಿಯಾಗಿದೆ.

ವಾರಂಗಲ್‌ನಲ್ಲಿ ಭಾನುವಾರ ರಾತ್ರಿ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರ ದೇಹ ಚರಂಡಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿತ್ತು. ಅವರನ್ನು ಶಿವನಗರದ ವೊರ್‍ರೊಮ್‌ ಕ್ರಾಂತಿ ಕುಮಾರ್‌ ಎಂದು ಗುರುತಿಸಲಾಗಿದೆ ಹಾಗೂ ಲ್ಯಾಪ್‌ಟಾಪ್‌ ಸಹ ದೊರೆತಿದೆ.

ಶಂಕರಪಲ್ಲಿಯಲ್ಲಿ 70ರ ವಯೋಮಾನದ ವ್ಯಕ್ತಿಯೊಬ್ಬರು ಕಾರಿನೊಂದಿಗೆ ಕೊಚ್ಚಿ ಹೋಗಿರುವುದು ಹಾಗೂ ಅದಿಲಾಬಾದ್‌ನಲ್ಲಿ 30 ವರ್ಷ ವಯಸ್ಸಿನ ಕಾರ್ಮಿಕರೊಬ್ಬರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಇಬ್ಬರು ಯುವತಿಯರು ಸಹ ನೀರಿನಲ್ಲಿ ಕೊಚ್ಚಿ ಹೋಗಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ರಾಜನ್ನ-ಸಿರಿಸಿಲ್ಲ ಜಿಲ್ಲೆಯಲ್ಲಿ ಹರಿಯುವ ನೀರಿನಲ್ಲಿ ಸಿಲುಕಿಕೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಿಂದ 12 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಹೈದರಾಬಾದ್‌, ಅದಿಲಾಬಾದ್‌, ನಿಜಾಮಾಬಾದ್‌, ಕರೀಂನಗರ್‌, ವಾರಂಗಲ್‌ ಹಾಗೂ ಖಮ್ಮುಂನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೃಷ್ಣ ಮತ್ತು ಗೋದಾವರಿ ನದಿಗಳ ನೀರಿನ ಹರಿವು ಹೆಚ್ಚಳವಾಗಿದೆ.SHARE THIS

Author:

0 التعليقات: