Sunday, 1 August 2021

ದೇಶದಲ್ಲಿ ಸತತ 5ನೇ ದಿನವೂ 40 ಸಾವಿರಕ್ಕಿಂತ ಅಧಿಕ ಕೋವಿಡ್ ಪ್ರಕರಣ

 

ದೇಶದಲ್ಲಿ ಸತತ 5ನೇ ದಿನವೂ 40 ಸಾವಿರಕ್ಕಿಂತ ಅಧಿಕ ಕೋವಿಡ್ ಪ್ರಕರಣ

ಹೊಸದಿಲ್ಲಿ: ಕೇರಳದಲ್ಲಿ ಸತತ ಐದನೇ ದಿನವೂ 20 ಸಾವಿರಕ್ಕಿಂತ ಹೆಚ್ಚು ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕೂಡಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ದೇಶದಲ್ಲಿ ಶನಿವಾರ 42 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ.

ಸತತ ಐದನೇ ದಿನ ದೇಶದಲ್ಲಿ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 40 ಸಾವಿರಕ್ಕಿಂತ ಅಧಿಕವಿದ್ದು, ಶನಿವಾರ ಒಟ್ಟು 42,052 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಕೇರಳ ರಾಜ್ಯದಲ್ಲೇ 20,624 ಪ್ರಕರಣಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರದಲ್ಲಿ 6959 ಪ್ರಕರಣಗಳು ವರದಿಯಾಗಿವೆ.

ತಮಿಳುನಾಡಿನಲ್ಲಿ ಸತತ ಮೂರನೇ ದಿನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ರಾಜ್ಯದಲ್ಲಿ 1986 ಪ್ರಕರಣಗಳು ವರದಿಯಾಗಿವೆ. ಶುಕ್ರವಾರ ತಮಿಳುನಾಡು 1947 ಪ್ರಕರಣಗಳನ್ನು ಕಂಡಿತ್ತು. ಇದು ಅಲ್ಪಪ್ರಮಾಣದ ಏರಿಕೆಯಾಗಿದ್ದರೂ, 69 ದಿನಗಳ ಇಳಿಕೆಯ ಹಾದಿ ಇದರಿಂದ ವಿಮುಖವಾದಂತಾಗಿದೆ. ಕರ್ನಾಟಕದಲ್ಲಿ 1987 ಪ್ರಕರಣಗಳು ವರದಿಯಾಗಿದ್ದು, ಇದು ಶುಕ್ರವಾರ ದಾಖಲಾದ 1890 ಪ್ರಕರಣಗಳಿಗಿಂತ ಅಧಿಕ.

ಶನಿವಾರ ದೇಶಾದ್ಯಂತ 540 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದು ಶುಕ್ರವಾರ ದಾಖಲಾದ ಸಾವಿನ ಸಂಖ್ಯೆಗೆ ಹೋಲಿಸಿದರೆ ಅಧಿಕವಾಗಿದ್ದು, ಸತತ ಐದನೇ ದಿನ ಸಾವಿನ ಸಂಖ್ಯೆ 500ಕ್ಕಿಂತ ಅಧಿಕ ಇದೆ.

ಏತನ್ಮಧ್ಯೆ ಜುಲೈ ತಿಂಗಳಲ್ಲಿ 12,44,696 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು ಹಿಂದಿನ ತಿಂಗಳು ದಾಖಲಾದ 22.3 ಲಕ್ಷ ಪ್ರಕರಣಗಳಿಗಿಂತ ಶೇಕಡ 45ರಷ್ಟು ಕಡಿಮೆ.


SHARE THIS

Author:

0 التعليقات: