Monday, 16 August 2021

3 ವರ್ಷದಿಂದ ಒಂದೇ ಯೋಜನೆಯ ಬಗ್ಗೆ ಸ್ವಾತಂತ್ರ್ಯ ದಿನ ಭಾಷಣದಲ್ಲಿ ಮೋದಿ ಉಲ್ಲೇಖ


 3 ವರ್ಷದಿಂದ ಒಂದೇ ಯೋಜನೆಯ ಬಗ್ಗೆ ಸ್ವಾತಂತ್ರ್ಯ ದಿನ ಭಾಷಣದಲ್ಲಿ ಮೋದಿ ಉಲ್ಲೇಖ

ಹೊಸದಿಲ್ಲಿ: ರವಿವಾರ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ  ಉದ್ಯೋಗ ಸೃಷ್ಟಿಗಾಗಿ ರೂ 100 ಲಕ್ಷ ಕೋಟಿ  ಇನ್ಫ್ರಾಸ್ಟ್ರಕ್ಚರ್ ಯೋಜನೆ ಆರಂಭಿಸಲಾಗುವುದು ಎಂದು ಘೋಷಿಸಿದ್ದರು. ಆದರೆ ಪ್ರಧಾನಿ 2019 ಹಾಗೂ 2020ರ ಸ್ವಾತಂತ್ರ್ಯ ದಿನದ ಭಾಷಣಗಳಲ್ಲೂ ಇದೇ ಯೋಜನೆಯನ್ನು ಘೋಷಿಸಿದ್ದರು.

ಗತಿ ಶಕ್ತಿ ಎಂಬ ಈ ಯೋಜನೆ ಭಾರತದ ಆರ್ಥಿಕತೆಗೆ ಪುನಶ್ಚೇತನ ನೀಡುವುದು ಎಂದು ರವಿವಾರ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಭಾಷಣದಲ್ಲಿ  ಹೇಳಿದ್ದರು.

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಸಹಿತ ಹಲವು ಸಾಮಾಜಿಕ ಜಾಲತಾಣಿಗರು ಪ್ರಧಾನಿಯ ಕಳೆದೆರಡು ವರ್ಷಗಳ ಸ್ವಾತಂತ್ರ್ಯ ದಿನದ ಭಾಷಣದ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದರಲ್ಲದೆ ಸತತ ಮೂರು ವರ್ಷ ಅದೇ ಯೋಜನೆಯನ್ನು ಬೇರೆ ಬೇರೆ ಹೆಸರು ನೀಡಿ ಹೇಳಿಕೊಳ್ಳುತ್ತಿರುವುದಕ್ಕೆ ಪ್ರಧಾನಿಯನ್ನು ಟೀಕಿಸಿದ್ದಾರೆ.

"ನಿಜ, ಠೊಳ್ಳು ಭರವಸೆಗಳನ್ನು ನೀಡುವುದರಲ್ಲಿ ಏನಿದೆ ಆದರೆ ಈಗ ಈ ಠೊಳ್ಳು ಭರವಸೆಗಳು ಕೂಡ ಹಳೆಯದ್ದಾಗಿವೆ" ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.

ತಮ್ಮ 2020ರ ಭಾಷಣದಲ್ಲಿ ಮೋದಿ ಈ ಯೋಜನೆಗೆ  ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಪೈಪ್‍ಲೈನ್ ಯೋಜನೆ ಎಂದು ಬಣ್ಣಿಸಿ ಅದಕ್ಕೆ ರೂ 110 ಲಕ್ಷ ಕೋಟಿ ಖರ್ಚು ಮಾಡಲಾಗುವುದು ಎಂದಿದ್ದರೆ, 2019ರ ಭಾಷಣದಲ್ಲಿ ಆಧುನಿಕ ಮೂಲಭೂತ ಯೋಜನೆಗಳ ಅಭಿವೃದ್ಧಿಗೆ ರೂ 100 ಲಕ್ಷ ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದರು.

ಈ ವರ್ಷದ  ತಮ್ಮ ಭಾಷಣದಲ್ಲಿ ಈ ಯೋಜನೆಗೆ ಗತಿ ಶಕ್ತಿ ಯೋಜನೆ ಎಂಬ ಹೆಸರು ಬಂದಿದೆ. ಈ ವರ್ಷದ ತಮ್ಮ ಭಾಷಣದಲ್ಲಿ ಪ್ರಧಾನಿ ಮಾಡಿದ ಹಲವು ಘೋಷಣೆಗಳು ಅದಾಗಲೇ ಜಾರಿಯಲ್ಲಿವೆ.

ರಕ್ಷಣಾ ಸಚಿವಾಲಯ ನಡೆಸುವ ಸೈನಿಕ್ ಶಾಲೆಗಳು ಈಗ ಬಾಲಕಿಯರಿಗೂ ಪ್ರವೇಶವಿದೆ ಎದು  ಅವರು ಹೇಳಿದ್ದರು. ಆದರೆ ವಾಸ್ತವವಾಗಿ ಐದು ಸೈನಿಕ್ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶ ನೀಡಲು 2019ರಲ್ಲಿಯೇ ನಿರ್ಧರಿಸಲಾಗಿತ್ತು.

ರೇಷನ್ ಅಂಗಡಿಗಳಲ್ಲಿ ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಊಟಕ್ಕೆ ವಿತರಿಸಲಾಗುವ ಅಕ್ಕಿಯನ್ನು ಕಬ್ಬಿಣದ ಸತ್ವ ಮತ್ತು ವಿಟಮಿನ್‍ಗಳಿಂದ ಫೋರ್ಟಿಫೈ ಮಾಡುವ ಸರಕಾರದ ಉದ್ದೇಶದ ಕುರಿತು ಮೋದಿ ತಮ್ಮ ರವಿವಾರದ ಭಾಷಣದಲ್ಲಿ ಘೋಷಿಸಿದ್ದರು. ಆದರೆ ಮಾಜಿ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ 2019ರಲ್ಲಿಯೇ ಇಂತಹ ಒಂದು ಪ್ರಾಯೋಗಿಕ ಯೋಜನೆಯನ್ನು ಘೋಷಿಸಿದ್ದರು.

ಮೋದಿ ತಮ್ಮ ಭಾಷಣದಲ್ಲಿ ಘೋಷಿಸಿದ ನ್ಯಾಷನಲ್ ಹೈಡ್ರೋಜನ್ ಮಿಷನ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಈ ವರ್ಷದ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.


SHARE THIS

Author:

0 التعليقات: