Sunday, 8 August 2021

ಒಲಿಂಪಿಕ್ಸ್‌ ಸಂದರ್ಭದಲ್ಲೇ ಕ್ರೀಡಾ ಬಜೆಟ್‌ಗೆ 230 ಕೋಟಿ ರೂ. ಕತ್ತರಿ ಹಾಕಿದ್ದ ಕೇಂದ್ರ ಸರ್ಕಾರ!

 

ಒಲಿಂಪಿಕ್ಸ್‌ ಸಂದರ್ಭದಲ್ಲೇ ಕ್ರೀಡಾ ಬಜೆಟ್‌ಗೆ 230 ಕೋಟಿ ರೂ. ಕತ್ತರಿ ಹಾಕಿದ್ದ ಕೇಂದ್ರ ಸರ್ಕಾರ!

ಚೆನ್ನೈ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ನೀರಜ್ ಛೋಪ್ರಾ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದಿದೆ. ಪ್ರಧಾನಿ ಮೋದಿ ಸೇರಿದಂತೆ ಕೇಂದ್ರದ ಹಲವು ಮಂದಿ ಸಚಿವರು ಛೋಪ್ರಾ ಸಾಧನೆಯ ಗುಣಗಾನ ಮಾಡಿದ್ದಾರೆ. ಆದರೆ ಒಲಿಂಪಿಕ್ ಕ್ರೀಡೆ ನಡೆಯುವ ವರ್ಷವೇ ಕೇಂದ್ರ ಸರ್ಕಾರ ತನ್ನ ಕ್ರೀಡಾ ಬಜೆಟ್‌ನಲ್ಲಿ 230 ಕೋಟಿ ರೂಪಾಯಿಯಷ್ಟು ಅನುದಾನ ಕಡಿತಗೊಳಿಸಿತ್ತು ಎನ್ನುವುದು ವಾಸ್ತವ.

ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ(ಎನ್‌ಎಸ್‌ಎಫ್‌) ಅನುದಾನವನ್ನು ಹೆಚ್ಚಿಸಿದರೂ, ಕ್ರೀಡಾಪಟುಗಳಿಗೆ ನೀಡುವ ಪ್ರೋತ್ಸಾಹಧನವನ್ನು ಸರ್ಕಾರ ಗಣನೀಯವಾಗಿ ಕಡಿತಗೊಳಿಸಿತ್ತು. 2020-21ರಲ್ಲಿ ಕ್ರೀಡಾ ಬಜೆಟ್ 2826.92 ಕೋಟಿ ರೂಪಾಯಿ ಆಗಿದ್ದರೆ, 2021-22ರಲ್ಲಿ ಕೇಂದ್ರ ಸರ್ಕಾರ ಇದನ್ನು 2,596.14 ಕೋಟಿ ರೂಪಾಯಿಗೆ ಕಡಿತಗೊಳಿಸಿತ್ತು. ಅಂದರೆ ಹಿಂದಿನ ವರ್ಷಕ್ಕಿಂತ 230.78 ಕೋಟಿ ರೂಪಾಯಿ ಕಡಿಮೆ ಅನುದಾನ ನೀಡಿತ್ತು. ಆದರೆ ಕೋವಿಡ್-19 ಸೋಂಕಿನಿಂದಾಗಿ ಕ್ರೀಡಾಚಟುವಟಿಕೆಗಳು ಕುಂಠಿತವಾದ ಹಿನ್ನೆಲೆಯಲ್ಲಿ 2020-21ರಲ್ಲಿ ವಾಸ್ತವವಾಗಿ 1,800.15 ಕೋಟಿ ರೂಪಾಯಿ ಮಾತ್ರ ವೆಚ್ಚವಾಗಿತ್ತು.

ಕೇಂದ್ರ ಸರ್ಕಾರ ಎನ್‌ಎಸ್‌ಎಫ್‌ಗಳಿಗೆ ನೀಡುತ್ತಿದ್ದ ನೆರವನ್ನು 25 ಕೋಟಿ ರೂಪಾಯಿಗಳಿಂದ 280 ಕೋಟಿ ರೂಪಾಯಿಗೆ ಹೆಚ್ಚಿಸಿತ್ತು. ಆದರೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಖೇಲೊ ಇಂಡಿಯಾಗೆ ಹಿಂದಿನ ವರ್ಷ ಇದ್ದ ಅನುದಾನವನ್ನು 890.42 ಕೋಟಿ ರೂಪಾಯಿಯಿಂದ 657.71 ಕೋಟಿಗೆ ಇಳಿಸಿತ್ತು. ಅಂದರೆ 232.71 ಕೋಟಿ ರೂಪಾಯಿ ಕಡಿತ ಮಾಡಿತ್ತು.

ಭಾರತದ ಕ್ರೀಡಾ ಪ್ರಾಧಿಕಾರಕ್ಕೆ ಅನುದಾನವನ್ನು 500 ಕೋಟಿ ರೂಪಾಯಿಗಳಿಂದ 612.21 ಕೋಟಿಗೆ ಹೆಚ್ಚಿಸಿದರೂ, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿಗೆ ನೀಡುತ್ತಿದ್ದ ಅನುದಾನವನ್ನು ಶೇಕಡ 50ರಷ್ಟು ಕಡಿತಗೊಳಿಸಿ 25 ಕೋಟಿ ರೂ.ಗೆ ಸೀಮಿತಗೊಳಿಸಿತ್ತು. 2010ರ ಕಾಮನ್ವೆಲ್ತ್ ಗೇಮ್ಸ್- ಸಾಯಿ ಸ್ಟೇಡಿಯಂ ಆಧುನೀಕರಣ ಅನುದಾನವನ್ನು ಕೂಡಾ 75 ಕೋಟಿ ರೂಪಾಯಿಗಳಿಂದ 30 ಕೋಟಿ ರೂ.ಗೆ ಇಳಿಸಿತ್ತು.


SHARE THIS

Author:

0 التعليقات: