Friday, 16 July 2021

ಮನೆಯಲ್ಲೆ ಕೊರೋನ ಲಸಿಕೆ ಪಡೆದ ಸಂಸದೆ ಪ್ರಜ್ಞಾ ಠಾಕೂರ್ :ಕಾಂಗ್ರೆಸ್ ತೀವ್ರ ಟೀಕೆ


 ಮನೆಯಲ್ಲೆ ಕೊರೋನ ಲಸಿಕೆ ಪಡೆದ ಸಂಸದೆ ಪ್ರಜ್ಞಾ ಠಾಕೂರ್ :ಕಾಂಗ್ರೆಸ್ ತೀವ್ರ ಟೀಕೆ

ಹೊಸದಿಲ್ಲಿ: ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರು ಈ ವಾರ ಮನೆಯಲ್ಲೆ ಕೊರೋನ ವಿರುದ್ಧ ಲಸಿಕೆ ಹಾಕಿಸಿಕೊಳ್ಳುವುದರೊಂದಿಗೆ  ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಭೋಪಾಲ್ ಸಂಸದೆ ಲಸಿಕೆ ಸ್ವೀಕರಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಅದು  ಅವರ ಮೊದಲ ಡೋಸ್ ಎಂದು ತಿಳಿದುಬಂದಿದೆ.

ರಾಜ್ಯ ಆಡಳಿತದ ಪ್ರಕಾರ, ಪ್ರಜ್ಞಾ ಠಾಕೂರ್ ಅವರು ‘ವೃದ್ಧರು ಮತ್ತು ವಿಕಲಚೇತನರಿಗೆ’ ಇರುವ ವಿಶೇಷ ನಿಯಮಗಳ ಅಡಿಯಲ್ಲಿ ಮನೆಯಲ್ಲೇ ವ್ಯಾಕ್ಸಿನೇಷನ್ ಪಡೆಯಲು ಅರ್ಹರಾಗಿದ್ದಾರೆ.

"ನಿಯಮದ ಪ್ರಕಾರ, ವೃದ್ಧರು ಹಾಗೂ ವಿಕಲಚೇತನರಿಗೆ ಅವರ ಮನೆಗಳಲ್ಲೇ ಲಸಿಕೆ ಹಾಕಲಾಗುತ್ತದೆ, ಆದ್ದರಿಂದ ಪ್ರಜ್ಞಾ ಠಾಕೂರ್ ಅವರಿಗೆ ಲಸಿಕೆ ಯ ಮೊದಲ ಡೋಸ್ ನೀಡುವಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ" ಎಂದು ರಾಜ್ಯ ರೋಗನಿರೋಧಕ ಅಧಿಕಾರಿ ಸಂತೋಷ್ ಶುಕ್ಲಾ ಎನ್‌ಡಿಟಿವಿಗೆ ತಿಳಿಸಿದರು.

ಆದರೆ ತಾನು ಬಾಸ್ಕೆಟ್‌ಬಾಲ್ ಆಡುತ್ತಿರುವುದು ಹಾಗೂ  ನೃತ್ಯ ಮಾಡುತ್ತಿರುವ ವೀಡಿಯೊಗಳನ್ನು ತೋರಿಸಿದ ನಂತರ ಪ್ರಜ್ಞಾ ಠಾಕೂರ್ ಅಂತಹ ರಿಯಾಯತಿಯನ್ನು ಪಡೆದುಕೊಂಡಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

"ನಮ್ಮ ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್ ಅವರು ಕೆಲವೇ ದಿನಗಳ ಹಿಂದೆ ಬಾಸ್ಕೆಟ್‌ಬಾಲ್ ಆಡುತ್ತಿದ್ದರು ಹಾಗೂ  ಮದುವೆ ಕಾರ್ಯಕ್ರಮದಲ್ಲಿ ಧೋಲ್ ಗಳ ನಾದಕ್ಕೆ ನೃತ್ಯ ಮಾಡುತ್ತಿದ್ದರು, ಇಂದು ತನ್ನ ಮನೆಗೆ ತಂಡವೊಂದನ್ನು ಕರೆಸಿಕೊಂಡು  ಲಸಿಕೆ ಹಾಕಿಸಿಕೊಂಡಿದ್ದಾರೆ.  ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ತನಕ ಎಲ್ಲ ಬಿಜೆಪಿ ನಾಯಕರು ಲಸಿಕೆ ಪಡೆಯಲು  ಆಸ್ಪತ್ರೆಗಳಿಗೆ ಹೋಗಿದ್ದರು. ನಮ್ಮ ಸಂಸದೆ ಠಾಕೂರ್  ಗೆ ಏಕೆ ರಿಯಾಯತಿ ನೀಡಲಾಗಿದೆ. ಯಾವ ಆಧಾರದಲ್ಲಿ ಹೀಗೆ ಮಾಡಲಾಗಿದೆ? "ಎಂದು ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಅವರು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

51 ವರ್ಷದ ಪ್ರಜ್ಞಾ ಠಾಕೂರ್ ವೈದ್ಯಕೀಯ ಕಾರಣಗಳಿಗಾಗಿ ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಹಲವಾರು ನ್ಯಾಯಾಲಯದ ವಿಚಾರಣೆಗಳಲ್ಲಿ ತನ್ನ ಆರೋಗ್ಯವನ್ನು ಉಲ್ಲೇಖಿಸಿ  ಜಾಮೀನು ಕೋರಿದ್ದರು.

ಕಳೆದ ತಿಂಗಳು ಪ್ರಜ್ಞಾ ಠಾಕೂರ್ ಅವರು ಭೋಪಾಲ್ ಸ್ಟೇಡಿಯಂನಲ್ಲಿ ಬಾಸ್ಕೆಟ್ ಬಾಲ್ ಕೋರ್ಟ್ ನಲ್ಲಿ ಬಾಸ್ಕೆಟ್ ಬಾಲ್ ಆಡಿದ್ದರು. ಇತ್ತೀಚೆಗಷ್ಟೇ  ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿದ್ದರು.  ಗಾಲಿ ಕುರ್ಚಿಯಲ್ಲಿ ಓಡಾಡುತ್ತಿದ್ದ ಪ್ರಜ್ಞಾ ಠಾಕೂರ್ ದಿಢೀರನೇ ನಡೆದಾಡಲು ಶುರು ಮಾಡಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.


SHARE THIS

Author:

0 التعليقات: