ಜನಸಂಖ್ಯಾ ಸ್ಫೋಟದ ಕುರಿತು ಮುಸ್ಲಿಂ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
ಗುವಾಹಟಿ: ಜನಸಂಖ್ಯೆ ನಿಯಂತ್ರಣ ನೀತಿಯನ್ನು ಮುಂದಿಟ್ಟುಕೊಂಡು, ಜನಸಂಖ್ಯೆಯ ಸ್ಫೋಟವನ್ನು ಸ್ಥಿರಗೊಳಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಕಾರ್ಯನಿರ್ವಹಿಸಲು ಎಂಟು ಉಪ ಗುಂಪುಗಳನ್ನು ರಚಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರವಿವಾರ ಪ್ರಕಟಿಸಿದ್ದಾರೆ.
ಸ್ಥಳೀಯ ಮುಸ್ಲಿಂ ಬುದ್ಧಿಜೀವಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಶರ್ಮಾ ಈ ಘೋಷಣೆ ಮಾಡಿದರು. ಜನಸಂಖ್ಯೆಯ ಸ್ಫೋಟವು ರಾಜ್ಯದ ಅಭಿವೃದ್ಧಿಗೆ, ವಿಶೇಷವಾಗಿ ಆರ್ಥಿಕತೆಗೆ ಪ್ರಮುಖ ಬೆದರಿಕೆಯಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದವರು ಒಪ್ಪಿಕೊಂಡರು ಮತ್ತು ಉಪ-ಗುಂಪುಗಳ ರಚನೆಗೆ ಹೆಚ್ಚಿನ ಒತ್ತು ನೀಡಿದರು ಎಂದು ಶರ್ಮಾ ಹೇಳಿದ್ದಾರೆ.
"ನಾವು ಅಗ್ರ ಐದು ರಾಜ್ಯಗಳಲ್ಲಿ ಇರಬೇಕಾದರೆ, ನಮ್ಮ ಜನಸಂಖ್ಯೆಯ ಸ್ಫೋಟವನ್ನು ನಾವು ನಿರ್ವಹಿಸಬೇಕು" ಎಂದು ಶರ್ಮಾ ಹೇಳಿದರು. ಜನಸಂಖ್ಯೆ ಸ್ಥಿರೀಕರಣ, ಆರೋಗ್ಯ, ಶಿಕ್ಷಣ, ಸಾಂಸ್ಕೃತಿಕ ಗುರುತು, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಉಪ ಗುಂಪುಗಳು ಕಾರ್ಯನಿರ್ವಹಿಸುತ್ತವೆ ಎಂದು ಮುಖ್ಯಮಂತ್ರಿ ಹೇಳಿದರು.
ಸ್ವಾತಂತ್ರ್ಯದ ನಂತರ ಸ್ಥಳೀಯ ಮುಸ್ಲಿಮ್ ಮುಖಂಡರೊಂದಿಗೆ ಅಸ್ಸಾಂ ಸರಕಾರ ನಡೆಸಿದ ಮೊದಲ ಸಭೆ ಇದಾಗಿದೆ. ವಲಸೆ ಬಂದ ಮುಸ್ಲಿಮರ ಪ್ರತಿನಿಧಿಗಳೊಂದಿಗೂ ನಾನು ಚರ್ಚಿಸುವುದಾಗಿ ಶರ್ಮಾ ಸಭೆಯ ನಂತರ ಹೇಳಿದರು.
0 التعليقات: