ಉತ್ತರಪ್ರದೇಶ: ದಲಿತ ಯುವಕನಿಗೆ ಥಳಿಸಿ, ಖಾಸಗಿ ಭಾಗಕ್ಕೆ ಹಾನಿಗೈದ ದುಷ್ಕರ್ಮಿಗಳು
ಲಕ್ನೋ: ದಲಿತ ಸಮುದಾಯಕ್ಕೆ ಸೇರಿದ 20 ವರ್ಷದ ಯುವಕನೋರ್ವನನ್ನು ತಲೆಗೂದಲು ಎಳೆದು, ಮೊಣಕೈಯಿಂದ ಒದ್ದು, ಕೋಲುಗಳಿಂದ ಥಳಿಸಿ ಗಾಯಗೊಳಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರ್ ನ ದೇಹತ್ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳನ್ನು ಪತ್ತೆಹಚ್ಚಲು ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಯುವಕನಿಗೆ ಥಳಿಸುತ್ತಾ, ಆತನ ಜಾತಿ ಯಾವುದು ಎಂದು ಪ್ರಶ್ನಿಸುವುದು ವೀಡಿಯೊದಲ್ಲು ಸೆರೆಯಾಗಿದೆ. ಆತ ತನ್ನ ಜಾತಿಯನ್ನು ಹೇಳಿದ ಕೂಡಲೇ ತೀವ್ರವಾಗಿ ಥಳಿಸಲಾಗಿದ್ದು, ಆತನ ಖಾಸಗಿ ಭಾಗಗಳಿಗೂ ಹಾನಿಯೆಸಗಲಾಗಿದೆ ಎಂದು ವರದಿ ತಿಳಿಸಿದೆ. ಯಾವುದೇ ಪ್ರತಿರೋಧವಿಲ್ಲದೇ ಥಳಿತಕ್ಕೀಡಾಗುತ್ತಿರುವ ದೃಶ್ಯವು ವೀಡಿಯೋದಲ್ಲಿ ಸೆರೆಯಾಗಿದೆ.
"ವೀಡಿಯೋ ಕುರಿತು ನಮಗೆ ಮಾಹಿತಿ ದೊರೆತಾಗಲೇ ಪೊಲೀಸ್ ಪ್ರಕರಣ ದಾಖಲಿಸಲಾಗಿತ್ತು. ವೀಡಿಯೋದಲ್ಲಿ ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ವ್ಯಕ್ತಿಗಳು ಥಳಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಅವರ ವಿವರಗಳನ್ನು ಪತ್ತೆಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರನ್ನು ಬಂಧಿಸಲು ತಂಡ ರಚಿಸಲಾಗಿದೆ ಎಂದು ಕಾನ್ಪುರ್ ನ ಹೆಚ್ಚುವರಿ ಎಸ್ಪಿ ಘನ್ ಶ್ಯಾಮ್ ಚೌರಾಸಿಯಾ ndtv ಗೆ ತಿಳಿಸಿದ್ದಾರೆ.
ಸದ್ಯ ಗಾಯಾಳುವನ್ನು ಕಾನ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
0 التعليقات: