Sunday, 4 July 2021

ಹಫೀಜ್ ಮನೆ ಬಳಿ ಸ್ಫೋಟದ ಹಿಂದೆ ಭಾರತದ 'ರಾ' ಕೈವಾಡ: ಪಾಕ್


ಹಫೀಜ್ ಮನೆ ಬಳಿ ಸ್ಫೋಟದ ಹಿಂದೆ ಭಾರತದ 'ರಾ' ಕೈವಾಡ: ಪಾಕ್

ಇಸ್ಲಾಮಾಬಾದ್: 2008ರ ಮುಂಬೈನ ಉಗ್ರರ ದಾಳಿ ಪ್ರಕರಣದ ಸೂತ್ರಧಾರಿ, ನಿಷೇಧಿತ ಜಮಾತ್ ಉದ್‌ ದಾವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಅವರ ನಿವಾಸದ ಸಮೀಪ ಕಳೆದ ತಿಂಗಳು ನಡೆದ ಸ್ಫೋಟದ ಹಿಂದೆ ಭಾರತೀಯ ನಾಗರಿಕನ ಕೈವಾಡವಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಆರೋಪಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪೊಲೀಸ್ ಮುಖ್ಯಸ್ಥ ಇನಾಮ್ ಘಾನಿ ಹಾಗೂ ಮಾಹಿತಿ ಸಚಿವ ಫವಾದ್ ಚೌಧರಿ ಅವರೊಂದಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಯೂಸುಫ್, ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕ ಹೊಂದಿರುವ ಭಾರತೀಯ ನಾಗರಿಕ ದಾಳಿಯ ಹಿಂದಿನ ಸೂತ್ರಧಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಭಯೋತ್ಪಾದಕರಿಂದ ವಶಪಡಿಸಿಕೊಂಡಿರುವ ವಿಧಿ ವಿಜ್ಞಾನದ ವಿಶ್ಲೇಷಣೆ, ಎಲೆಕ್ಟ್ರಾನಿಕ್ ಉಪಕರಣಗಳ ಸಾಕ್ಷ್ಯಗಳ ಸಹಾಯದಿಂದ ದಾಳಿಯ ಹಿಂದಿನ ಮುಖ್ಯ ಮಾಸ್ಟರ್ ಮೈಂಡ್ ಯಾರೆಂಬುದು ಗುರುತಿಸಿದ್ದೇವೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಇಲ್ಲ. ಆತ ಭಾರತೀಯ ಗುಪ್ತಚರ ಇಲಾಖೆ 'ರಾ' (ಗುಪ್ತಚರ ಇಲಾಖೆ, ರಿಸರ್ಚ್ ಅನಾಲಿಸಿಸ್ ವಿಂಗ್, RAW)ಗೆ ಸೇರಿದ್ದು, ಆತ ಭಾರತೀಯ ಪ್ರಜೆ, ಭಾರತ ಮೂಲದವ ಎಂದಿದ್ದಾರೆ.

ಜೂನ್ 23ರಂದು ಲಾಹೋರ್‌ನ ಜೋಹರ್ ಟೌನ್‌ನಲ್ಲಿರುವ ಬೋರ್ಡ್ ಆಫ್ ರೆವೆನ್ಯೂ (ಬಿಒಆರ್) ಹೌಸಿಂಗ್ ಸೊಸೈಟಿಯಲ್ಲಿ ಹಫೀಜ್ ಅವರ ಮನೆ ಬಳಿ ಸಂಭವಿಸಿದ ಪ್ರಬಲ ಕಾರು ಬಾಂಬ್ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದರು.

ಈ ವರೆಗೆ ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ.SHARE THIS

Author:

0 التعليقات: