ಬೆಂಗಳೂರು: ಅಡುಗೆ ಅನಿಲ, ಇಂಧನ ತೈಲ ಬೆಲೆಯೇರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು: ಅಡುಗೆ ಅನಿಲ, ಇಂಧನ ತೈಲ ಬೆಲೆಯೇರಿಕೆ ಖಂಡಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ಆನಂದರಾವ್ ವೃತ್ತದ ರೇಸ್ ಕೋರ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಯ ಬಳಿ ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಯಿತು.
ಕೇಂದ್ರ ಬಿಜೆಪಿ ಸರ್ಕಾರ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ಏರಿಕೆ ಮಾಡುವುದರ ಮೂಲಕ ಜನ ಸಾಮಾನ್ಯರ ನಿತ್ಯ ಜೀವನಕ್ಕೆ ಕೊಡಲಿ ಏಟು ನೀಡುತ್ತಿದೆ. ಕೊರೋನ ಪಿಡುಗಿನಿಂದ ಇಡೀ ದೇಶವೇ ತತ್ತರಿಸುತ್ತಿದೆ, ಬೆಲೆಯೇರಿಕೆ ಗಗನಕ್ಕೇರುತ್ತಿದೆ ಆದರೂ ಬೆಲೆ ಏರಿಕೆ ಕಡಿತಗೊಳಿಸದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಏರಿಸುತ್ತಲೇ ಇದೆ. ಇದರಿಂದ ಜನರುನಿತ್ಯ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಎಲ್ ಪಿಜಿ ದರವನ್ನು ಪ್ರತಿ ತಿಂಗಳು ಇಪ್ಪತ್ತೈದು ರೂ.ನಂತೆ ಏರಿಕೆ ಮಾಡುವುದರ ಮೂಲಕ ಕಳೆದೊಂದು ವರ್ಷದಲ್ಲಿ ಹತ್ತು ಬಾರಿ ದರ ಏರಿಕೆ ಮಾಡಿ ಗರಿಷ್ಠ 250 ರೂ. ವಾರ್ಷಿಕ ಏರಿಕೆ ಮಾಡಿ ಜನವಿರೋಧಿ ಆಡಳಿತವನ್ನು ಕೇಂದ್ರ ಸರಕಾರ ನಡೆಸುತ್ತಿದೆ. ಬೆಲೆ ಏರಿಕೆಯಲ್ಲಿ ದಾಖಲೆ ಮಾಡಿರುವ ಈ ಸರ್ಕಾರ ತೊಲಗದೆ ಹೋದರೆ ದೇಶದ ಜನರ ಜೀವವೂ ಅಪಾಯಕ್ಕೆ ಸಿಲುಕಲಿದೆ. ಆದ್ದರಿಂದ ಸರಕಾರ ಕೂಡಲೇ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥರಾದ ಎಸ್.ಮನೋಹರ್, ಜಿ. ಜನಾರ್ದನ್, ಎ.ಆನಂದ್, ಎಂ.ಎ. ಸಲೀಂ, ಈ.ಶೇಖರ್, ರವಿಶೇಕರ್, ಪ್ರಕಾಶ್, ಮಹೇಶ್, ಪುಟ್ಟರಾಜು, ಪಕ್ಷದ ಮುಖಂಡರಾದ ರವಿಶೇಖರ್ ಪ್ರಕಾಶ್ ಮಹೇಶ್ ಪುಟ್ಟರಾಜು ಉಮೇಶ್ ಭಾಗವಹಿಸಿದ್ದರು.
0 التعليقات: