ಎಸೆಸೆಲ್ಸಿ ಪರೀಕ್ಷೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಪಿಯುಸಿ ಪರೀಕ್ಷೆ ರದ್ದುಗೊಳಿಸಿರುವ ರೀತಿಯಲ್ಲೇ ಎಸೆಸೆಲ್ಸಿ ಪರೀಕ್ಷೆಯನ್ನೂ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ಈ ಕುರಿತು ನಗರದ ಜ್ಞಾನಮಂದಿರ ಟ್ರಸ್ಟ್ ಎಸ್.ವಿ.ಸಿಂಗ್ರೇಗೌಡ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಿರಿಯ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾ.ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಈ ವೇಳೆ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಎಸೆಸೆಲ್ಸಿ ಪರೀಕ್ಷೆಗಳನ್ನು ಜುಲೈ 19 ಹಾಗೂ 20ರಂದು ದಿನಕ್ಕೆ ಮೂರು ಸಬ್ಜೆಕ್ಟ್ ಗಳಂತೆ 2 ದಿನಗಳ ಕಾಲ ನಡೆಸಲು ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಪರೀಕ್ಷೆಗಳನ್ನು ನಡೆಸಲು ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ಕೋವಿಡ್ ಸೋಂಕು ಕೂಡ ಇಳಿಮುಖ ವಾಗಿದ್ದು, ಪರೀಕ್ಷೆ ನಡೆಸಲು ಯಾವುದೇ ಸಮಸ್ಯೆಗಳಿಲ್ಲ ಎಂದು ವಿವರಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠ, ಕೊರೋನ ಸೋಂಕು ಇಳಿಮುಖವಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ, ವಿದ್ಯಾರ್ಥಿಗಳ ಪರೀಕ್ಷೆ ಬರೆಯಲು ಸಮಸ್ಯೆಯಾಗದು. ಹೀಗಾಗಿ, ಪರೀಕ್ಷೆ ನಡೆಸದಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿತು.
0 التعليقات: