ಕರಾವಳಿಯಲ್ಲಿ ಮುಂಗಾರು ಬಿರುಸು: ಮಳೆ ಆರ್ಭಟಕ್ಕೆ ನೆಲಸಮವಾದ ಕಿರುಸೇತುವೆ
ಮಂಗಳೂರು, ಜು.13: ಬಂಗಾಳ ಕೊಲ್ಲಿಯ ಪಶ್ಚಿಮ ಭಾಗದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಜು.15ರವರೆಗೆ ವ್ಯಾಪಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ದ.ಕ. ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಮುಂಗಾರು ಮಳೆ ಸತತವಾಗಿ ಮಳೆ ಸುರಿಯುತ್ತಿದೆ. ಪಶ್ಚಿಮ ಘಟ್ಟ ತಪ್ಪಲಿನಲ್ಲೂ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯ ಜೀವನಾಡಿಯಂತಿರುವ ನೇತ್ರಾವತಿ, ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ನೆಲಸಮವಾದ ಕಿರುಸೇತುವೆ: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕಂಕನಾಡಿ ‘ಬಿ’ ಗ್ರಾಮದಲ್ಲಿನ ನೆಕ್ಕರೆಮಾರ್ ಪ್ರದೇಶದಲ್ಲಿ ವಾಹನಗಳ ಒಡನಾಟಕ್ಕೆ ಅವಕಾಶ ಕಲ್ಪಿಸಲು ಕಿರುಸೇತುವೆ ಕಟ್ಟಲಾಗಿತ್ತು. ಹಲವು ದಿನಗಳಿಂದ ಸುರಿದ ಮಳೆಗೆ ಕಿರು ಸೇತುವೆಯು ಬಿದ್ದಿದೆ. ಪರಿಣಾಮ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ತೆರಳಲು ಅಡಚಣೆಯಾಗಿದೆ.
ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಳಕ್ಕಾಗಮಿಸಿದರು. ಈ ಕುರಿತು ಪರಿಶೀಲನೆ ನಡೆಸಿದ ಮೇಯರ್, ಈ ಬಗ್ಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಪಾಲಿಕೆಯ ಸದಸ್ಯ ಪ್ರವೀಣ್ ಚಂದ್ರ ಆಳ್ವ ಮತ್ತು ಕಾರ್ಯಪಾಲಕ ಅಭಿಯಂತರ ರವಿಶಂಕರ್ ಉಪಸ್ಥಿತರಿದ್ದರು.
ನಗರ ಮತ್ತು ಹೊರವಲಯದ ಕೆಲವು ಕಡೆ ಮರಗಳು ಉರುಳಿವೆ. ಮನೆಯೊಳಗೆ ನೀರು ನುಗ್ಗಿವೆ. ನಗರದ ಜೆಪ್ಪಿನಮೊಗರು ಸಮೀಪದ ಮನೆಯೊಂದಕ್ಕೆ ನೀರು ನುಗ್ಗಿದೆ. ಅಲ್ಲಿ ವಿಕಲಚೇತನ ಮಹಿಳೆಯು ಒಂಟಿಯಾಗಿದ್ದರು ಎಂದು ತಿಳಿದುಬಂದಿದೆ.
ನಗರದಲ್ಲೆಡೆ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿತ್ತು. ಅಲ್ಲದೆ, ಸಂಚಾರ ದಟ್ಟಣೆಯಿಂದ ಜನರ ಓಡಾಟಕ್ಕೆ ಸಮಸ್ಯೆಯಾಗಿಯೂ ಪರಿಣಮಿಸಿದೆ.
0 التعليقات: