Sunday, 4 July 2021

ಹಲಾಲ್ ಮಾಂಸದ ಪೂರೈಕೆಗಾಗಿ ಟೆಂಡರ್ ಕರೆದಿದ್ದ ವೆಲ್ಹಾಮ್ ಸ್ಕೂಲ್ ನ ವಿರುದ್ಧ ಪ್ರಕರಣ ದಾಖಲು


 ಹಲಾಲ್ ಮಾಂಸದ ಪೂರೈಕೆಗಾಗಿ ಟೆಂಡರ್ ಕರೆದಿದ್ದ ವೆಲ್ಹಾಮ್ ಸ್ಕೂಲ್ ನ ವಿರುದ್ಧ ಪ್ರಕರಣ ದಾಖಲು

ಹೊಸದಿಲ್ಲಿ: ಉತ್ತರಾಖಂಡದ ಡೆಹ್ರಾಡೂನಿನ ಪ್ರತಿಷ್ಠಿತ ವೆಲ್ಹಾಮ್ ಬಾಲಕರ ವಸತಿ ಶಾಲೆಯ ಮೆಸ್ಗಾಗಿ ಹಲಾಲ್ ಮಾಂಸದ ಪೂರೈಕೆದಾರರಿಂದ ಟೆಂಡರ್ ಗಳನ್ನು ಕರೆದಿದ್ದಕ್ಕಾಗಿ ಶಾಲಾಧಿಕಾರಿಗಳ ವಿರುದ್ಧ ಪೊಲೀಸರು ಶನಿವಾರ ಪ್ರಕರಣವನ್ನು ದಾಖಲಿಸಿದ್ದಾರೆ.

'ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದಕ್ಕಾಗಿ’ ಬಜರಂಗ ದಳದ ಸಂಚಾಲಕ ವಿಕಾಸ ವರ್ಮಾ ದೂರನ್ನು ದಾಖಲಿಸಿದ್ದಾಗಿ The Times of India ವರದಿ ಮಾಡಿದೆ. ಶಾಲೆಯ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕರ ವಿರುದ್ಧ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಥವಾ ಸೃಷ್ಟಿಸುವ ಹೇಳಿಕೆಗಳಿಗೆ ಸಂಬಂಧಿಸಿದ ಐಪಿಸಿಯ ಕಲಂ 505(2)ರಡಿ ಈ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳನ್ನು ಮತಾಂತರಗೊಳಿಸುವ ಉದ್ದೇಶದಿಂದ ಹಲಾಲ್ ಮಾಂಸದ ಪೂರೈಕೆಗಾಗಿ ಶಾಲೆಯು ಟೆಂಡರ್ಗಳನ್ನು ಕರೆದಿದೆ. ಇದರಿಂದಾಗಿ ಹಿಂದು ಸಮುದಾಯದ ಭಾವನೆಗಳಿಗೆ ನೋವುಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಟೆಂಡರ್ ಗಳನ್ನು ಆಹ್ವಾನಿಸಿದ್ದ ಜಾಹೀರಾತಿನ ಕುರಿತು ಬಜರಂಗ ದಳ ಸದಸ್ಯರು ಇತ್ತೀಚಿಗೆ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು.

‘ನಾವು ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿ ಹಿಂದು ವಿದ್ಯಾರ್ಥಿಗಳು ಮತ್ತು ಸಮುದಾಯವನ್ನು ಅವಮಾನಿಸಿದ್ದಕ್ಕಾಗಿ ಶಾಲಾಡಳಿತದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ. ಉದ್ವಿಗ್ನತೆಯನ್ನು ಕೆರಳಿಸುತ್ತಿರುವುದಕ್ಕಾಗಿ ಆಡಳಿತದ ವಿರುದ್ಧ ಕಠಿಣ ಕ್ರಮಕ್ಕಾಗಿ ನಾವು ಒತ್ತಾಯಿಸುತ್ತಿದ್ದೇವೆ ’ಎಂದು  News18ನೊಂದಿಗೆ ಮಾತನಾಡಿದ್ದ ವರ್ಮಾ ತಿಳಿಸಿದ್ದರು.

ವಿಷಯವನ್ನು ಉತ್ಪ್ರೇಕ್ಷಿಸಿರುವಂತೆ ಕಂಡುಬರುತ್ತಿದೆ, ಆದರೆ ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಶಾಲಾಡಳಿತವು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಿತ್ತು ಎಂದು ಶಾಲೆಯ ಹಳೇವಿದ್ಯಾರ್ಥಿಗಳ ಸಂಘದ ಗುರ್ಜ್ಯೋತಿಂದರ್ ಸಿಂಗ್ ಹೇಳಿದರು.


SHARE THIS

Author:

0 التعليقات: