ಮಕ್ಕಳಿಗೆ ಈ ಬಾರಿಯೂ ಸೈಕಲ್ ಅನುಮಾನ
ಮಂಗಳೂರು: ಕೊರೊನಾ ಕಾರಣ ಕಳೆದ ವರ್ಷ ಆನ್ಲೈನ್ ತರಗತಿಗಳಷ್ಟೇ ನಡೆದದ್ದರಿಂದ “ಸೈಕಲ್ ಭಾಗ್ಯ’ ವಂಚಿತರಾಗಿದ್ದ ಸರಕಾರಿ /ಅನುದಾನಿತ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳು ಈ ಬಾರಿಯೂ ಸೈಕಲ್ಗಳನ್ನು ಪಡೆಯುವುದು ಬಹುತೇಕ ಅನುಮಾನ!
2019-20ನೇ ಸಾಲಿನಲ್ಲಿ ರಾಜ್ಯದಲ್ಲಿ 2,44,901 ಬಾಲಕಿಯರು ಹಾಗೂ 2,59,624 ಬಾಲಕರಿಗೆ ನೀಡಲಾಗಿತ್ತು. ಕಳೆದ ವರ್ಷ 5 ಲಕ್ಷ ಸೈಕಲ್ ವಿತರಿಸುವ ಅಂದಾಜು ಇತ್ತು. ಆದರೆ ಲಾಕ್ಡೌನ್, ಅನುದಾನದ ಕೊರತೆ ಇತ್ಯಾದಿ ಕಾರಣಗಳಿಂದ ಕೈ ಬಿಡಲಾಗಿತ್ತು. ಜನವರಿಯಿಂದ ಮಾರ್ಚ್ ವರೆಗೆ ಭೌತಿಕ ತರಗತಿ ನಡೆದಿದ್ದರೂ ನೀಡಿರಲಿಲ್ಲ. ಹೀಗಾಗಿರುವಾಗ ಈ ಬಾರಿಯೂ ಸೈಕಲ್ ಪಡೆಯುವ ಭರವಸೆ ಮಕ್ಕಳಲ್ಲಿಲ್ಲ.
“ಪ್ರತೀ ವರ್ಷ ಆಗಸ್ಟ್ ವೇಳೆಗೆ ಸೈಕಲ್ ವಿತರಣೆಯಾಗುತ್ತದೆ. ಅದಕ್ಕೂ ಮುನ್ನ ಬೇಡಿಕೆ ಸಲ್ಲಿಕೆಯಾಗುತ್ತದೆ. ಈ ಬಾರಿ ಆ ಪ್ರಕ್ರಿಯೆ ನಡೆದಿಲ್ಲ. ಭೌತಿಕ ತರಗತಿ ಆರಂಭ ಸಾಧ್ಯತೆಯಿದ್ದರೆ ಮಾತ್ರ ಸೈಕಲ್ ವಿತರಣೆ ನಡೆಯಬಹುದು. ಸರಕಾರದ ತೀರ್ಮಾನವಾದ್ದರಿಂದ ಈ ಬಗ್ಗೆ ಏನೂ ಹೇಳಲಾಗದು’ ಎಂದು ತಾಲೂಕು ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಬಿಎಸ್ವೈ ಯೋಜನೆ
ಗ್ರಾಮೀಣ ಭಾಗದ ಸರಕಾರಿ/ಅನುದಾನಿತ 8ನೇ ತರಗತಿ ಶಾಲಾ ಮಕ್ಕಳಿಗಾಗಿ 2008ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ “ಸೈಕಲ್ ಭಾಗ್ಯ’ ಯೋಜನೆ ಪ್ರಕಟಿಸಿದ್ದರು. ನಗರಪಾಲಿಕೆಗಳ ಸರಹದ್ದಿನಲ್ಲಿ ಬರುವ ಶಾಲೆಗಳ ಮಕ್ಕಳು ಮತ್ತು ಬಸ್ಪಾಸ್ ಹಾಗೂ ಹಾಸ್ಟೆಲ್ ಸೌಲಭ್ಯ ಹೊಂದಿರುವ ಮಕ್ಕಳನ್ನು ಹೊರತುಪಡಿಸಿ ಇತರ ಮಕ್ಕಳಿಗೆ ಈ ಸೌಲಭ್ಯ ದೊರೆಯುತ್ತದೆ.
ಸರಕಾರದ ನಿರ್ದೇಶನದಂತೆ ಕ್ರಮ
ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್, ಅಪರಾಹ್ನದ ಉಪಾಹಾರ, ಸ್ಕೂಲ್ ಬ್ಯಾಗ್ (ಎಸ್ಸಿ/ಎಸ್ಟಿ ಮಕ್ಕಳಿಗೆ) ಸೇರಿದಂತೆ ಎಲ್ಲ ಯೋಜನೆಗಳಿಗೂ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ. ಭೌತಿಕ ತರಗತಿ ಆರಂಭವಾದರೆ ನೀಡಲಾಗುವುದು. ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು..
ಸಮವಸ್ತ್ರವೂ ಸಂಶಯ
ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್ಗಳನ್ನು ಕೂಡ ಆನ್ಲೈನ್ ತರಗತಿ ನೆಪದಿಂದ ಆರಂಭದಲ್ಲಿ ನೀಡಿರಲಿಲ್ಲ. ಬಳಿಕ ಜನವರಿಯಿಂದ ಮಾರ್ಚ್ವರೆಗೆ ಭೌತಿಕ ತರಗತಿ ನಡೆದ ಹಿನ್ನೆಲೆಯಲ್ಲಿ ನೀಡಲಾಗಿತ್ತು. ಈ ಬಾರಿಯೂ ಆನ್ಲೈನ್ ಸಮಯದಲ್ಲಿ ಇವೆಲ್ಲ ದೊರಕುವುದು ಅನುಮಾನ.
0 التعليقات: