Monday, 12 July 2021

ಗ್ಯಾಸ್ ಗೀಝರ್ ಆನ್ ಮಾಡಿ ಸ್ನಾನ ಮಾಡುತ್ತಿದ್ದ ಯುವಕ ಸಾವು


ಗ್ಯಾಸ್ ಗೀಝರ್ ಆನ್ ಮಾಡಿ ಸ್ನಾನ ಮಾಡುತ್ತಿದ್ದ ಯುವಕ ಸಾವು

ಬಂಟ್ವಾಳ: ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಝರ್ ನಿಂದಾಗಿ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. 

ಇಲ್ಲಿನ ಇಸ್ಮಾಯೀಲ್ ಎಂಬವರ ಪುತ್ರ ಇಜಾಝ್ ಅಹ್ಮದ್ (23) ಮೃತಪಟ್ಟ ಯುವಕ. ಈತ ಸ್ನಾನದ ಕೊಠಡಿಯಲ್ಲಿ ಗ್ಯಾಸ್ ಗೀಝರ್ ಅನ್ನು ಆನ್ ಮಾಡಿ ಸ್ನಾನ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. 

ಸ್ನಾನಕ್ಕೆ ತೆರಳಿದ ಇಜಾಝ್ ಅಹ್ಮದ್ ಒಂದು ಗಂಟೆಯಾದರೂ ಹೊರ ಬರದ ಹಿನ್ನೆಲೆಯಲ್ಲಿ ಹಾಗೂ ಕರೆದರೆ ದ್ವನಿ ನೀಡದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಆತನ ತಂದೆ ಮತ್ತು ಸಹೋದರರು ಬಾಗಿಲು ಒಡೆದು ನೋಡಿದಾಗ ಆತ ಕೊಠಡಿಯಲ್ಲಿ ಬಿದ್ದಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ. ಗ್ಯಾಸ್ ಗೀಝರ್ ನಲ್ಲಿ ನೀರು ಬಿಸಿ ಮಾಡುವ ವೇಳೆ ಗೀಝರ್ ನಿಂದ ಹೊರ ಬರುವ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಸಾವು ಸಂಭವಿಸಿದೆ ಎನ್ನಲಾಗಿದೆ.

ಹುಬ್ಬಳ್ಳಿಯ ಜುವೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಜಾಝ್ ಅಹ್ಮದ್ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ‌ ಎನ್ನಲಾಗಿದೆ. 

ಮೃತ ಯುವಕ ತಂದೆ, ತಾಯಿ, ಮೂವರು ಸಹೋದರರನ್ನು ಅಗಲಿದ್ದಾನೆ.


SHARE THIS

Author:

0 التعليقات: