Sunday, 18 July 2021

ಸಾರ್ವಜನಿಕರು ಎಚ್ಚೆತ್ತುಕೊಂಡಾಗ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ: ಡಿ.ವಿ.ಸದಾನಂದಗೌಡ


 ಸಾರ್ವಜನಿಕರು ಎಚ್ಚೆತ್ತುಕೊಂಡಾಗ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ: ಡಿ.ವಿ.ಸದಾನಂದಗೌಡ

ಬೆಂಗಳೂರು: ರಾಜ್ಯ ಸರಕಾರದ ಮಾರ್ಗಸೂಚಿಯಿಂದಲೇ ಕೊರೊನ ನಿಯಂತ್ರಣ ಸಾಧ್ಯವಿಲ್ಲ. ಸಾರ್ವಜನಿಕರು ಎಚ್ಚೆತ್ತುಕೊಂಡಾಗ ಮಾತ್ರ ಇದು ತಹಬದಿಗೆ ಬರಲು ಸಾಧ್ಯ' ಎಂದು ಕೇಂದ್ರ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಇಲ್ಲಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಕೋವಿಡ್ ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬದಂತೆ ತಡೆಗಟ್ಟುವುದಾದರೆ ಸಾರ್ವಜನಿಕರ ಸಹಕಾರ ಅತ್ಯಂತ ಮಹತ್ವದ್ದು. ಸರಕಾರ ನಿಯಮಗಳನ್ನು ಜಾರಿ ಮಾಡಿದ ತಕ್ಷಣ ಸೋಂಕು ನಿಯಂತ್ರಣಕ್ಕೆ ಬಂದುಬಿಡುತ್ತದೆ ಎಂದುಕೊಳ್ಳಬೇಡಿ. ಪ್ರತಿಯೊಬ್ಬರು ಎಚ್ಚೆತ್ತುಕೊಂಡು ನಿಮ್ಮ ನಿಮ್ಮ ಮನೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ, ಅನಗತ್ಯವಾಗಿ ಹೊರಗೆ ಹೋಗದಿರುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಸಲಹೆ ಮಾಡಿದರು. 

ದೇಶದಲ್ಲಿ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನ ನಿಯಂತ್ರಣವನ್ನು ಅತ್ಯಂತ ಸಮರ್ಪಕವಾಗಿ ನಿಯಂತ್ರಿಸಿದ್ದಾರೆ. ಅತ್ಯಂತ ಸೋಂಕು ಹೊಂದಿರುವ ಅಪಖ್ಯಾತಿಗೆ ಗುರಿಯಾಗಿದ್ದ ಭಾರತ ಇಂದು ವಿಶ್ವವೇ ನಿಬ್ಬೆರಗಾಗುವಂತೆ ಕೊರೊನ ನಿಯಂತ್ರಣ ಮಾಡಿದೆ ಎಂದು ಸದಾನಂದಗೌಡ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಅಬಕಾರಿ ಇಲಾಖೆ ಸಚಿವ ಗೋಪಾಲಯ್ಯ ಕ್ಷೇತ್ರದಲ್ಲಿ ಕೊರೋನ ನಿಯಂತ್ರಣಕ್ಕೆ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಆಹಾರದ ಕಿಟ್ ವಿತರಣೆ, ಸಾರ್ವಜನಿಕರಿಗೆ ಉಚಿತವಾಗಿ ಆಹಾರಧಾನ್ಯಗಳ ವಿತರಣೆ, ಮಾಸ್ಕ್ ಸ್ಯಾನಿಟೈಸರ್, ಲಸಿಕೆ, ಔಷಧಿಗಳನ್ನು  ಕೊಡುವ ಮೂಲಕ ನೊಂದವರ ಕಣ್ಣೀರನ್ನು ಒರೆಸಿದ್ದಾರೆಂದು ಡಿವಿಎಸ್ ಇದೇ ವೇಳೆ ಪ್ರಶಂಸಿಸಿದರು. 

ಅಬಕಾರಿ ಸಚಿವ ಗೋಪಾಲಯ್ಯ ಮಾತನಾಡಿ, `ಕೊರೊನ ಸಂಕಷ್ಟದ ಸಂದರ್ಭದಲ್ಲೂ ನನ್ನ ಕ್ಷೇತ್ರದ ಜನರಿಗೆ ನ್ಯಾಯ ಒದಗಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ. ಇಂದು ನಾನು ಈ ಮಟ್ಟಕ್ಕೆ ಬೆಳೆಯಬೇಕಾದರೆ ನಿಮ್ಮ ಆಶೀರ್ವಾದವೇ ಕಾರಣ. ನನಗೆ ಎಷ್ಟೇ, ಕಷ್ಟ ನೋವುಗಳಿದ್ದರೂ ಇಂತಹ ಸಂದರ್ಭದಲ್ಲಿ ನಿಮ್ಮನ್ನು ಕೈಬಿಡುವುದಿಲ್ಲ' ಎಂದು ಅಭಯ ನೀಡಿದರು. 

`ಸಾರ್ವಜನಿಕರು ಕೊರೊನ ನಮ್ಮನ್ನು ಬಿಟ್ಟು ಹೋಗಿದೆ ಎಂದು ಭಾವಿಸಿಕೊಳ್ಳಬೇಡಿ. ಅದು ಈಗಲೂ ಇದೆ. ಮೂರನೇ ಅಲೆ ಬರಬಹುದೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಎಚ್ಚೆತ್ತುಕೊಂಡು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು' ಎಂದು ಕ್ಷೇತ್ರದ ಜನರಿಗೆ ಮನವಿ ಮಾಡಿದರು. ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ.ನರೇಂದ್ರ ಬಾಬು, ಮಂಡಲದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಾಜಿ ಉಪ ಮೇಯರ್ ಹರೀಶ್, ಜಯರಾಮಯ್ಯ, ವೆಂಕಟೇಶ ಮೂರ್ತಿ ವೆಂಕಟೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.


SHARE THIS

Author:

0 التعليقات: