Friday, 16 July 2021

ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೆ ಅಧಿವೇಶನದಲ್ಲಿ ಒತ್ತಾಯ: ರಘುಪತಿ ಭಟ್‌


 ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೆ ಅಧಿವೇಶನದಲ್ಲಿ ಒತ್ತಾಯ: ರಘುಪತಿ ಭಟ್‌

ಉಡುಪಿ : ಉತ್ತರ ಪ್ರದೇಶ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಕರ್ನಾಟಕದಲ್ಲೂ ಜಾರಿಗೆ ತರುವ ಅವಶ್ಯಕತೆ ಇದೆ. ಈ ಸಂಬಂಧ ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಸರಕಾರ ಮತ್ತು ಮುಖ್ಯಮಂತ್ರಿಯನ್ನು ಒತ್ತಾಯಿಸಲಾಗುವುದು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಂಬಲಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ಶುಕ್ರವಾರ ಆಯೋಜಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆ ಮತ್ತು ಮಲೇರಿಯಾ/ಡೆಂಗಿ ವಿರೋಧಿ ಮಾಸಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆಯಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳ ಇರುವವರಿಗೆ ಯಾವುದೇ ಸರಕಾರಿ ಸೌಲಭ್ಯ ದೊರೆಯುವುದಿಲ್ಲ. ಇದು ಸಮಾನ ನಾಗರಿಕ ಸಂಹಿತೆಗೆ ಹತ್ತಿರವಾದ ಒಳ್ಳೆಯ ಕಾನೂನು ಆಗಿದೆ. ಕರ್ನಾಟಕದಲ್ಲೂ ಇಂತಹ ಕಾನೂನು ಜಾರಿಗೆ ತರುವ ಅವಶ್ಯಕತೆ ಇದೆ ಎಂದರು.

ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದದೆ ಜನಸಂಖ್ಯೆ ನಿಯಂತ್ರಣ ಮಾಡುವ ಬಗ್ಗೆ ಎಲ್ಲರು ಸಂಕಲ್ಪ ಮಾಡಬೇಕು. ಅದನ್ನು ಕಾನೂನಾಗಿ ರೂಪಿಸಲು ರಾಜ್ಯ ಸರಕಾರ ಮುಂದೆ ಬರಬೇಕು. ಈ ಮೂಲಕ ಎಲ್ಲರಿಗೂ ಸಮಾನವಾದ ಜನಸಂಖ್ಯೆ ನಿಯಂತ್ರಣ ಕಾನೂನು ತರಬೇಕು ಎಂದು ಭಟ್ ಅಭಿಪ್ರಾಯ ಪಟ್ಟರು.

ಜನಸಂಖ್ಯೆ ನಮ್ಮ ದೇಶದ ಶಕ್ತಿಯಾಗಿದೆ. ಯವ ಜನತೆಯ ಸಂಖ್ಯೆಯಲ್ಲಿ ಭಾರತ ಇಡೀ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ. ಸರಕಾರದ ಈಗಾಗಲೇ ಮಾಡಿರುವ ‘ಒಂದು ಬೇಕು, ಎರಡು ಸಾಕು’ ಎಂಬ ನೀತಿಯಿಂದಲೇ ನಮಗೆ ಬೇಕಾದಷ್ಟು ಮಾನವ ಸಂಪನ್ಮೂಲ ದೊರೆಯುತ್ತದೆ. ಆದರೆ ಒಂದು ಕುಟುಂಬದಲ್ಲಿ ಎರಡು ಮಕ್ಕಳಿಗಿಂತ ಜಾಸ್ತಿ ಮಕ್ಕಳಿದ್ದರೆ ದೇಶಕ್ಕೆ ಸಮಸ್ಯೆಯಾಗುತ್ತದೆ ಎಂದರು.

ಒಂದು ಕುಟುಂಬಕ್ಕೆ ಎರಡು ಮಕ್ಕಳ ನೀತಿಯನ್ನು ಪಾಲಿಸಿಕೊಂಡರೆ ನಮಗೆ ಬೇಕಾದಷ್ಟು ಮತ್ತು ಇಡೀ ಜಗತ್ತಿಗೆ ಮಾನವ ಸಂಪನ್ಮೂಲಗಳನ್ನು ಒದಗಿಸುವ ಫ್ಯಾಕ್ಟರಿಯಾಗಿ ಭಾರತವನ್ನು ರೂಪಿಸಬಹುದು. ಆದರೆ ಒಂದು ಬೇಕು ಎಷ್ಟು ಮಕ್ಕಳು ಮಾಡಬಹುದು ಎಂದು ತಿಳಿದರೆ ಬಹಳ ಸಮಸ್ಯೆಯಾಗುತ್ತದೆ. ಇದರಿಂದ ಅಸಮತೋಲನ ಉಂಟಾಗಿ ಆರ್ಥಿಕ ಸಮಸ್ಯೆ ಆಗುತ್ತದೆ ಎಂದು ಅವರು ಹೇಳಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸದಸ್ಯ ಹರೀಶ್ ಶೆಟ್ಟಿ, ಡಿಎಚ್‌ಓ ಡಾ.ನಾಗಭೂಷಣ ಉಡುಪ, ಧರ್ಮಸ್ಥಳ ಯೋಜನೆಯ ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮೊದಲಾದವರು ಉಪಸ್ಥಿತರಿದ್ದರು.


SHARE THIS

Author:

0 التعليقات: