ಮಾನವ ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ನಿಧನ
ಮುಂಬೈ : ಕಳೆದ ವರ್ಷ ಎಲ್ಗರ್ ಪರಿಷತ್ ಪ್ರಕರಣದಲ್ಲಿ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಲ್ಪಟ್ಟಿದ್ದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟ್ಯಾನ್ ಸ್ವಾಮಿ ದೀರ್ಘಕಾಲದ ಅನಾರೋಗ್ಯದ ನಂತರ ಸೋಮವಾರ ಮಧ್ಯಾಹ್ನ 1:30ಕ್ಕೆ ಸಾವನ್ನಪ್ಪಿದ್ದಾರೆ ಎಂದು ಅವರ ವಕೀಲರು ಸೋಮವಾರ ಬಾಂಬೆ ಹೈಕೋರ್ಟ್ಗೆ ಮಾಹಿತಿ ನೀಡಿದರು.
84 ವರ್ಷದ ಸ್ಟ್ಯಾನ್ ಸ್ವಾಮಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ರವಿವಾರದಿಂದ ವೆಂಟಿಲೇಟರ್ ಬೆಂಬಲದಲ್ಲಿದ್ದರು.
ಮೇ 28 ರಂದು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸ್ಟ್ಯಾನ್ ಸ್ವಾಮಿ ಅವರು ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ವಾರ, ಸ್ಟಾನ್ ಸ್ವಾಮಿ ಹೈಕೋರ್ಟ್ನಲ್ಲಿ ಜಾಮೀನು ಕೋರಿ ಹೊಸ ಅರ್ಜಿಯನ್ನು ಸಲ್ಲಿಸಿದ್ದರು. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಬಂಧಿಸಲ್ಪಟ್ಟ ಆರೋಪಿಗಳಿಗೆ ಜಾಮೀನು ನೀಡಲು ಕಠಿಣ ಷರತ್ತುಗಳನ್ನು ವಿಧಿಸುವ ಯುಎಪಿಎ ಸೆಕ್ಷನ್ ವೊಂದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಎಲ್ಗರ್ ಪರಿಷತ್ ಪ್ರಕರಣದಲ್ಲಿ ಸ್ಟಾನ್ ಸ್ವಾಮಿ ಹಾಗೂ ಸಹ-ಆರೋಪಿಗಳನ್ನು ನವೀ ಮುಂಬಯಿಯ ತಲೋಜ ಜೈಲಿನಲ್ಲಿಇರಿಸಲಾಗಿತ್ತು. ಜೈಲಿನಲ್ಲಿ ಅಸಮರ್ಪಕ ಆರೋಗ್ಯ ಸೌಲಭ್ಯಗಳ ಬಗ್ಗೆ ಸ್ವಾಮಿ ಹಾಗೂ ಸಹ ಆರೋಪಿಗಳು ಪದೇ ಪದೇ ದೂರು ನೀಡಿದ್ದರು. ಜೈಲಿನಲ್ಲಿ ಇವರನ್ನು ವಿಚಾರಣಾದೀನ ಕೈದಿಗಳಾಗಿ ಇರಿಸಲಾಗಿತ್ತು.
0 التعليقات: