"ಅಮಾಯಕ ಮುಸ್ಲಿಮರಿಗೆ ಕಿರುಕುಳ ನೀಡಿದ ಬಿಜೆಪಿ ನಾಯಕರನ್ನು ಹುದ್ದೆಯಿಂದ ಕಿತ್ತೊಗೆಯಿರಿ" ; ದಿಗ್ವಿಜಯ ಸಿಂಗ್
ಹೊಸದಿಲ್ಲಿ: ಎಲ್ಲಾ ಭಾರತೀಯರ ಡಿಎನ್ಎ ಒಂದೇ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ ಮರುದಿನ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, "ಭಾಗ್ವತ್ ಅವರು ತಮ್ಮ ಮಾತುಗಳಿಗೆ ನಿಷ್ಠರಾಗಿದ್ದಲ್ಲಿ ಅಮಾಯಕ ಮುಸ್ಲಿಮರಿಗೆ `ಕಿರುಕುಳ' ನೀಡಿದ ಎಲ್ಲಾ ಬಿಜೆಪಿ ನಾಯಕರನ್ನು ಅವರ ಹುದ್ದೆಗಳಿಂದ ಕಿತ್ತೊಗೆಯಲು ಸೂಚಿಸಬೇಕು," ಎಂದು ಆಗ್ರಹಿಸಿದ್ದಾರೆ.
"ಆದರೆ ಭಾಗ್ವತ್ ಹಾಗೆ ಮಾಡುವುದಿಲ್ಲ ಹಾಗೂ ಅವರ ಮಾತು ಮತ್ತು ಕೃತಿಯ ನಡುವೆ ಬಹಳಷ್ಟು ವ್ಯತ್ಯಾಸವಿದೆ" ಎಂದೂ ಸಿಂಗ್ ಹೇಳಿದರು.
"ಎಲ್ಲಾ ಭಾರತೀಯರ ಡಿಎನ್ಎ ಒಂದೇ ಆಗಿದೆ ಹಾಗೂ ಮುಸ್ಲಿಮರನ್ನು ದೇಶ ಬಿಟ್ಟು ತೆರಳುವಂತೆ ಹೇಳುವವರು ತಮ್ಮನ್ನು ಹಿಂದುಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ," ಎಂಬ ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆ ಕುರಿತ ವರದಿಯೊಂದನ್ನೂ ಟ್ಯಾಗ್ ಮಾಡಿ ಟ್ವೀಟ್ ಮಾಡಿದ ದಿಗ್ವಿಜಯ್ ಸಿಂಗ್, "ಮೋಹನ್ ಭಾಗ್ವತ್ ಜೀ, ನೀವು ನಿಮ್ಮ ಅಭಿಪ್ರಾಯಗಳನ್ನು ನಿಮ್ಮ ಶಿಷ್ಯರು, ಪ್ರಚಾರಕರು ಹಾಗೂ ವಿಶ್ವ ಹಿಂದು ಪರಿಷದ್/ಬಜರಗದಳ ಕಾರ್ಯಕರ್ತರಿಗೂ ತಿಳಿಸುವಿರಾ? ಮೋದಿ-ಶಾ ಜೀ ಮತ್ತು ಬಿಜೆಪಿ ಸೀಎಂಗಳಿಗೂ ತಿಳಿಸುವಿರಾ? ಮೋಹನ್ ಭಾಗ್ವತ್ ಜೀ, ನಿಮ್ಮ ಶಿಷ್ಯರು ಈ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತೆ ನೀವು ಕಡ್ಡಾಯಗೊಳಿಸಿದರೆ ನಾನು ನಿಮ್ಮ ಅಭಿಮಾನಿಯಾಗುತ್ತೇನೆ," ಎಂದು ಅವರು ಹೇಳಿದರು.
"ಆರೆಸ್ಸೆಸ್ ಹಿಂದುಗಳು ಹಾಗೂ ಮುಸ್ಲಿಮರ ನಡುವೆ `ದ್ವೇಷ' ಮೂಡಿಸಿದೆ ಹಾಗೂ ಈಗ ಸರಸ್ವತಿ ಶಿಶು ಮಂದಿರದಿಂದ ಹಿಡಿದು ಸಂಘ ನೀಡುವ ಬುದ್ಧಿಜೀವಿ ತರಬೇತಿಗಳಿಂದ' ಮುಸ್ಲಿಮರ ವಿರುದ್ಧ ಬಿತ್ತಲಾದ ಆ ದ್ವೇಷದ ಬೀಜಗಳನ್ನು ಕಿತ್ತೊಗೆಯುವುದು ಅಷ್ಟು ಸುಲಭವಲ್ಲ" ಎಂದು ಕೂಡ ಟ್ವೀಟ್ ಮಾಡಿದ ಸಿಂಗ್ "ನೀವು ನಿಮ್ಮ ಅಭಿಪ್ರಾಯಗಳಿಗೆ ಪ್ರಾಮಾಣಿಕರಾಗಿದ್ದರೆ, ಮುಗ್ಧ ಮುಸ್ಲಿಮರಿಗೆ ಕಿರುಕುಳ ನೀಡಿದ ಬಿಜೆಪಿಯ ನಾಯಕರನ್ನು ಅವರ ಹುದ್ದೆಗಳಿಂದ ಕಿತ್ತೊಗೆಯುವಂತೆ ಸೂಚನೆ ನೀಡಿ" ಎಂದು ಬರೆದಿದ್ದಾರೆ.
ರವಿವಾರ ಗಝಿಯಾಬಾದ್ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ್ದ `ಹಿಂದುಸ್ತಾನ್ ಫಸ್ಟ್ ಹಿಂದುಸ್ತಾನಿ ಬೆಸ್ಟ್' ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಭಾಗ್ವತ್ ಮೇಲಿನ ಮಾತುಗಳನ್ನಾಡಿದ್ದರು.
0 التعليقات: