Saturday, 17 July 2021

ನಿಝಾಮುದ್ದೀನ್ ಮರ್ಕಝ್ ಅರ್ಜಿ: ಉತ್ತರ ನೀಡುವ ಇರಾದೆ ನಿಮಗಿದೆಯೇ? ಎಂದು ಕೇಂದ್ರವನ್ನು ಪ್ರಶ್ನಿಸಿದ ದಿಲ್ಲಿ ಹೈಕೋರ್ಟ್


 ನಿಝಾಮುದ್ದೀನ್ ಮರ್ಕಝ್ ಅರ್ಜಿ: ಉತ್ತರ ನೀಡುವ ಇರಾದೆ ನಿಮಗಿದೆಯೇ? ಎಂದು ಕೇಂದ್ರವನ್ನು ಪ್ರಶ್ನಿಸಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ : ಕಳೆದ ವರ್ಷ ನಡೆದಿದ್ದ ತಬ್ಲೀಗಿ ಜಮಾತ್ ಸಮಾವೇಶದ ಸ್ಥಳವಾಗಿರುವ ನಿಝಾಮುದ್ದೀನ್ ಮರ್ಕಝ್ ಅನ್ನು ಮತ್ತೆ ತೆರೆಯಲು ಅನುಮತಿಸುವಂತೆ ಕೋರಿ ದಿಲ್ಲಿ ವಕ್ಫ್ ಮಂಡಳಿ ಸಲ್ಲಿಸಿರುವ ಅಪೀಲಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರಕಾರ ಅನುಸರಿಸುತ್ತಿರುವ ವಿಳಂಬವನ್ನು ನ್ಯಾಯಾಲಯ ಆಕ್ಷೇಪಿಸಿದೆ.

ಅಪೀಲನ್ನು ಫೆಬ್ರವರಿಯಲ್ಲಿಯೇ ಸಲ್ಲಿಸಲಾಗಿದ್ದರೂ ಕೇಂದ್ರ ಇನ್ನೂ ತನ್ನ ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂಬ ವಿಚಾರವನ್ನು ಶುಕ್ರವಾರದ ವಿಚಾರಣೆ ವೇಳೆ  ಜಸ್ಟಿಸ್ ಮುಕ್ತಾ ಗುಪ್ತಾ ಅವರ ಏಕಸದಸ್ಯ ಪೀಠ ಗಂಭೀರವಾಗಿ ತೆಗೆದುಕೊಂಡಿದೆ.

"ನಿಮಗೆ ಉತ್ತರ ಸಲ್ಲಿಸುವ ಇರಾದೆ ಇದೆಯೇ? ಅಫಿಡವಿಟ್ ಸಲ್ಲಿಸಲು ಈ ಹಿಂದೆ ನೀವು ಹೆಚ್ಚು ಕಾಲಾವಕಾಶ ಕೋರಿದ್ದೀರಿ. ರಮಝಾನ್ ಅವಧಿಗೆ ನಿಝಾಮುದ್ದೀನ್ ಮರ್ಕಝ್ ತೆರೆಯುವ ಕುರಿತಂತೆ ಸ್ಥಿತಿಗತಿ ವರದಿಯನ್ನಷ್ಟೇ ನೀವು ಕೊನೆಯ ಬಾರಿಗೆ ಸಲ್ಲಿಸಿದ್ದು,'' ಎಂದು ನ್ಯಾಯಾಲಯ ಹೇಳಿದೆಯಲ್ಲದೆ ಕೇಂದ್ರಕ್ಕೆ ತನ್ನ ಉತ್ತರ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಿದೆ. ಒಟ್ಟಾರೆ ಅಫಿಡವಿಟ್ ಮತ್ತು ರಿಜಾಯಿಂಡರ್ ಕಳಿಸಲು ಮೂರು ವಾರಗಳ ಕಾಲಾವಕಾಶವಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ ನಲ್ಲಿ ನಡೆಯಲಿದೆ ಎಂದು ನ್ಯಾಯಾಲಯ ಹೇಳಿದೆ. ಅಂತೆಯೇ ಮುಂದಿನ ವಿಚಾರಣೆ ಸೆಪ್ಟೆಂಬರ್ 21ರಂದು ನಡೆಯಲಿದೆ.


SHARE THIS

Author:

0 التعليقات: