ಮೇಕೆದಾಟು ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಜು. 6: `ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ `ಮೇಕೆದಾಟು ಯೋಜನೆ'ಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 35ನೆ ಪುಣ್ಯ ಸ್ಮರಣೆ ಅಂಗವಾಗಿ ಅವರ ಪ್ರತಿಮೆ ಬಳಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, `ಮೇಕೆದಾಟು ಯೋಜನೆಯನ್ನು ಜಾರಿ ಮಾಡುತ್ತೇವೆ. ಈ ವಿಚಾರದಲ್ಲಿ ರಾಜ್ಯದ ಜನತೆಗೆ ಅನುಮಾನ ಬೇಡ. ಯಾವುದೇ ಕಾರಣಕ್ಕೂ ಉದ್ದೇಶಿತ ಮೇಕೆದಾಟು ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ' ಎಂದು ವಿವರಣೆ ನೀಡಿದರು.
`ಕಾನೂನು ಚೌಕಟ್ಟಿನಲ್ಲೇ ಮೇಕೆದಾಟು ಯೋಜನೆಯನ್ನು ಆರಂಭಿಸಿ ರಾಜ್ಯ ಸರಕಾರ ತ್ವರಿತವಾಗಿ ಪೂರ್ಣಗೊಳಿಸಲಿದೆ. ಯೋಜನೆ ಜಾರಿ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈಗಾಗಲೇ ಈ ಯೋಜನೆಗೆ ಸಂಬಂಧಿಸಿದ ವಿಚಾರಗಳು ಅನುಕೂಲಕರವಾಗಿವೆ. ಆದರೂ, ತಮಿಳುನಾಡಿನ ಮುಖ್ಯಮಂತ್ರಿಗೆ ಪತ್ರ ಬರೆದು ಸೌಹಾರ್ದಯುತವಾಗಿ ಕೆಲಸ ಮಾಡೋಣ ಎಂದು ಕೋರಲಾಗಿತ್ತು. ಆದರೆ, ಅವರು ಸರಿಯಾಗಿ ನಮ್ಮ ಪತ್ರಕ್ಕೆ ಸ್ಪಂದಿಸಲಿಲ್ಲ' ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.
`ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಾಬು ಜಗಜೀವನರಾಮ್ ಅವರು ಸಮಾಜದ ಶೋಷಿತ ಮತ್ತು ಅವಕಾಶ ವಂಚಿತರ ಉದ್ಧಾರಕ್ಕೆ ಶ್ರಮಿಸಿದರು. ರಾಷ್ಟ್ರದಲ್ಲಿ ತಲೆದೋರಿದ್ದ ಆಹಾರ ಸಮಸ್ಯೆಯನ್ನು ಹಸಿರುಕ್ರಾಂತಿ ಮೂಲಕ ನಿವಾರಿಸಿ ಆಹಾರ ಸ್ವಾವಲಂಬನೆಗೆ ದಾರಿ ತೋರಿದರು. ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾಗಿದ್ದ ಅವರು 5 ದಶಕಗಳಿಗೂ ಹೆಚ್ಚು ಕಾಲ ಬದ್ದತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದರು' ಎಂದು ಯಡಿಯೂರಪ್ಪ ನೆನಪು ಮಾಡಿಕೊಂಡರು.
0 التعليقات: