Friday, 16 July 2021

ಅಫ್ಘಾನಿಸ್ತಾನದಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಫೋಟೊ ಪತ್ರಕರ್ತ ದಾನಿಶ್ ಸಿದ್ದೀಕಿ ಮೃತ್ಯು


 ಅಫ್ಘಾನಿಸ್ತಾನದಲ್ಲಿ ನಡೆದ ಘರ್ಷಣೆಯಲ್ಲಿ ಭಾರತೀಯ ಫೋಟೊ ಪತ್ರಕರ್ತ ದಾನಿಶ್ ಸಿದ್ದೀಕಿ ಮೃತ್ಯು

ಕಾಬೂಲ್:‌ ಅಫ್ಘಾನಿಸ್ತಾನದ ಕಂದಹಾರ್‌ ನಗರದ ಸ್ಪಿನ್‌ ಬೊಲಾಕ್‌ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ ಭಾರತೀಯ ಫೋಟೊ ಪತ್ರಕರ್ತ ದಾನಿಶ್ ಸಿದ್ದೀಕಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರು ಅಫ್ಘಾನಿಸ್ತಾನದ ವಿಶೇಷ ಪಡೆಗಳೊಂದಿಗೆ ವರದಿ ನಡೆಸುತ್ತಿರುವ ಸಂದರ್ಭದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು indiatoday.in ವರದಿ ಮಾಡಿದೆ.

ದಾನಿಶ್ ಸಿದ್ದೀಕಿ ನಿಧನದ ಕುರಿತು ಭಾರತದ ಅಫ್ಘಾನ್‌ ರಾಯಭಾರಿ ಫರೀದ್‌ ಮಾಮುಂಡ್ಝೆ ಟ್ವೀಟ್‌ ಮಾಡಿದ್ದಾರೆ. "ನಿನ್ನೆ ರಾತ್ರಿ ಕಂದಹಾರ್‌ ನಲ್ಲಿ ಸ್ನೇಹಿತ ದಾನಿಶ್ ಸಿದ್ದೀಕಿಯವರ ಹತ್ಯೆಯಾಗಿದ್ದನ್ನು ತಿಳಿದು ತೀವ್ರ ದುಃಖವಾಗಿದೆ. ಭಾರತೀಯ ಪತ್ರಕರ್ತ ಹಾಗೂ ಪುಲಿಟ್ಜರ್‌ ಪ್ರಶಸ್ತಿ ವಿಜೇತ ಸಿದ್ದೀಕಿ ಅಫ್ಘಾನ್‌ ಪಡೆಗಳೊಂದಿಗಿದ್ದರು. ಅವರು ಕಾಬೂಲ್‌ ಗೆ ತೆರಳುವ ಎರಡು ವಾರಗಳ ಮುಂಚೆ ನಾನು ಭೇಟಿಯಾಗಿದ್ದೆ. ಅವರ ಕುಟುಂಬಕ್ಕೆ ಮತ್ತು ರಾಯ್ಟರ್ಸ್‌ ಗೆ ಸಂತಾಪಗಳು" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಫೋಟೊ ಜರ್ನಲಿಸ್ಟ್ ಆಗಿ, ದಾನಿಶ್ ಸಿದ್ದಿಕಿ ಪ್ರಪಂಚದಾದ್ಯಂತದ ವ್ಯಾಪಕವಾದ ಹಲವು ಸಮಸ್ಯೆಗಳನ್ನು ವರದಿ ಮಾಡಿದ್ದರು. ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಹಾಂಗ್ ಕಾಂಗ್ ಪ್ರತಿಭಟನೆಗಳು ಮತ್ತು ನೇಪಾಳದ ಭೂಕಂಪಗಳನ್ನು ವರದಿ ಮಾಡಿದ್ದರು.

ಕಳೆದ ಕೆಲವು ದಿನಗಳಿಂದ, ದಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದ ಕಂದಹಾರ್ನಲ್ಲಿನ ಪರಿಸ್ಥಿತಿಯ ಕುರಿತು ವರದಿ ಮಾಡುತ್ತಿದ್ದರು.. ಅವರು ಕೆಲವು ಕಾರ್ಯಾಚರಣೆಗಳಲ್ಲಿ ಅಫಘಾನ್ ವಿಶೇಷ ಪಡೆಗಳೊಂದಿಗೆ ಸೇರಿಕೊಂಡು ವರದಿ ತಯಾರಿಸುತ್ತಿದ್ದರು ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಅಫ್ಘಾನ್ ವಿಶೇಷ ಪಡೆಗಳು ತಾಲಿಬಾನ್ ದಾಳಿಗೆ ಒಳಗಾದಾಗ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


SHARE THIS

Author:

0 التعليقات: