ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ತನಿಖೆಗೆ ಫ್ರೆಂಚ್ ನ್ಯಾಯಾಧೀಶರ ನೇಮಕ: ಫ್ರಾನ್ಸ್ ಮಾಧ್ಯಮ ವರದಿ
ಹೊಸದಿಲ್ಲಿ: ವಿವಾದಿತ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರ ಕುರಿತಂತೆ ನ್ಯಾಯಾಂಗ ತನಿಖೆಯ ನೇತೃತ್ವವನ್ನು ವಹಿಸಲು ಫ್ರೆಂಚ್ ನ್ಯಾಯಾಧೀಶರನ್ನು ನೇಮಿಸಲಾಗಿದೆ ಎಂದು ಫ್ರೆಂಚ್ ವೆಬ್ ತಾಣ ಮೀಡಿಯಾಪಾರ್ಟ್ ಶುಕ್ರವಾರ ವರದಿ ಮಾಡಿದೆ.
ಫ್ರೆಂಚ್ ಪಬ್ಲಿಕ್ ಪ್ರಾಸಿಕ್ಯೂಶನ್ ಸರ್ವಿಸಸ್ ಪಿಎನ್ಎಫ್ ನ ಆರ್ಥಿಕ ಅಪರಾಧ ವಿಭಾಗ ಕೈಗೊಂಡ ತೀರ್ಮಾನದಂತೆ 2016ರಲ್ಲಿ ನಡೆದ ರಫೇಲ್ ಒಪ್ಪಂದದ ಕುರಿತಂತೆ ಜೂನ್ 14ರಂದು ಈ ಭಾರೀ ಸೂಕ್ಷ್ಮ ಪ್ರಕರಣದ ತನಿಖೆ ಆರಂಭಗೊಂಡಿದೆ ಎಂದು ವರದಿ ಹೇಳಿದೆ.
ಮೂವತ್ತಾರು ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ಕುರಿತಂತೆ ಮೀಡಿಯಾಪಾರ್ಟ್ ಎಪ್ರಿಲ್ 2021ರಲ್ಲಿ ಪ್ರಕಟಿಸಿದ ಸರಣಿ ತನಿಖಾ ವರದಿಗಳ ಬೆನ್ನಲ್ಲಿ ಈ ತನಿಖೆ ಆರಂಭಿಸಲಾಗಿದೆ. ಈ ಒಪ್ಪಂದದಲ್ಲಿ ಮಧ್ಯವರ್ತಿಯೊಬ್ಬರ ಪಾತ್ರ ಹಾಗೂ ಇದು ಭಾರತದ ಜಾರಿ ನಿರ್ದೇಶನಾಲಯಕ್ಕೆ ತಿಳಿದಿದರೂ ಇಲ್ಲಿಯ ತನಕ ತನಿಖೆ ನಡೆಸುವ ಗೋಜಿಗೆ ಅದು ಹೋಗಿರಲಿಲ್ಲ ಎಂಬ ಕುರಿತು ಮೀಡಿಯಾ ಪಾರ್ಟ್ ವರದಿ ಮಾಡಿತ್ತು.
ಇದೀಗ ತನಿಖೆ ಕೈಗೆತ್ತಿಕೊಂಡಿರುವ ಪಿಎನ್ಎಫ್ 2019ರಲ್ಲಿ ತನಿಖೆಯಿಂದ ಹಿಂದೆ ಜಾರಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.
ಈ ಲೇಟೆಸ್ಟ್ ಬೆಳವಣಿಗೆ ಕುರಿತಂತೆ ರಫೇಲ್ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಇನ್ನೂ ಪ್ರತಿಕ್ರಿಯಿಸಿಲ್ಲ. ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್, ಡಸ್ಸಾಲ್ಟ್ ನ ಭಾರತೀಯ ಪಾಲುದಾರನಾಗಿರುವುದರಿಂದ ಎರಡೂ ಕಂಪೆನಿಗಳ ನಡುವಿನ ವ್ಯವಹಾರವೂ ತನಿಖೆಯ ಭಾಗವಾಗುವ ನಿರೀಕ್ಷೆಯಿದೆ.
0 التعليقات: