Friday, 30 July 2021

ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ; ಕೇರಳ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿ


 ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ; ಕೇರಳ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿ

ತಿರುವನಂತಪುರಂ: ಶಿಕ್ಷಣ ಸಚಿವ ವಿ.ಶಿವನ್‌ ಕುಟ್ಟಿ ಅವರ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಒಕ್ಕೂಟದ ಸದಸ್ಯರು ನಡೆಸಿದ ಪ್ರತಿಭಟನೆ, ಗದ್ದಲದಿಂದಾಗಿ ಶುಕ್ರವಾರವೂ ಕೇರಳ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿಯುಂಟಾಯಿತು.

2015ರ ಕೇರಳ ವಿಧಾನಸಭೆಯಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಸಚಿವ ಶಿವನ್‌ ಕುಟ್ಟಿ ಸೇರಿದಂತೆ ಎಲ್‌ಡಿಎಫ್‌ನ ಕೆಲ ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಲು ಸುಪ್ರೀಂ ಕೋರ್ಟ್‌ ಅನುಮತಿ ನಿರಾಕರಿಸಿದ ನಂತರ, ವಿರೋಧ ಪಕ್ಷದ ಶಾಸಕರು ಸದನದಲ್ಲಿ ಶಿವನ್‌ ಕುಟ್ಟಿ ರಾಜೀನಾಮೆಗೆ ಪಟ್ಟು ಹಿಡಿದು, ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಸತತ ಎರಡನೇ ದಿನವೂ ಸದನ ಕಲಾಪಕ್ಕೆ ಅಡ್ಡಿಯುಂಟಾಗಿದೆ.

'ಶಿವನ್‌ ಕುಟ್ಟಿ ಅವರ ರಾಜೀನಾಮೆ ಪಡೆಯಲು, ಯಾವುದೇ ಸಕಾರಣವಿಲ್ಲ. ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಅವರ ವಿರುದ್ಧ ಯಾವುದೇ ನಿರ್ದಿಷ್ಟ ಪ್ರಕರಣಗಳೂ ಉಲ್ಲೇಖವಾಗಿಲ್ಲ' ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುನರುಚ್ಚರಿಸಿದ್ದಾರೆ.

ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿರೋಧ ಪಕ್ಷಗಳ ಸದಸ್ಯರು ಶುಕ್ರವಾರ ಸಭಾತ್ಯಾಗ ಮಾಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿವೆ.


SHARE THIS

Author:

0 التعليقات: