Wednesday, 7 July 2021

ಪುತ್ತೂರು: ಇಂಧನ ಬೆಲೆಯೇರಿಕೆ ವಿರೋಧಿಸಿ ಕಾಂಗ್ರೆಸ್ ಸೈಕಲ್ ಜಾಥಾ

 

ಪುತ್ತೂರು: ಇಂಧನ ಬೆಲೆಯೇರಿಕೆ ವಿರೋಧಿಸಿ ಕಾಂಗ್ರೆಸ್ ಸೈಕಲ್ ಜಾಥಾ

ಪುತ್ತೂರು: ಅಚ್ಚೇ ದಿನ್ ಕೊಡುತ್ತೇವೆ ಎಂದು ಹೇಳುತ್ತಾ ಅಧಿಕಾರ ಪಡೆದ ನರೇಂದ್ರ ಮೋದಿ ಇದೀಗ ಜನರಿಗೆ ಸಂಕಷ್ಟಗಳನ್ನು ನೀಡುತ್ತಲೇ ಅಚ್ಚೇ ದಿನ್ ತೋರಿಸುತ್ತಿದ್ದಾರೆ. ಮನ್‌ಕೀ ಬಾತ್ ನೀಡುತ್ತಿರುವ ಪ್ರಧಾನಿ, ಬಾತ್ ಬಂದ್ ಮಾಡಿ ಜನರಿಗೆ ಸಹಾಯ ಮಾಡಲು ಮುಂದಾಗಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿಸೋಜ ಒತ್ತಾಯಿಸಿದ್ದಾರೆ.

ಇಂಧನ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ಪುತ್ತೂರು ಪೇಟೆಯಲ್ಲಿ ನಡೆದ ಸೈಕಲ್ ಜಾಥಾವನ್ನು ನೆಹರೂ ನಗರದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

 ಹಿಂದೆಲ್ಲಾ ಪೆಟ್ರೋಲ್ ಡೀಸೆಲ್‌ಗಳಿಗೆ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿದಾಗ ಭಾರೀ ಪ್ರತಿಭಟನೆ ನಡೆಸುತ್ತಿದ್ದ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕ ಸಂಜೀವ ಮಠಂದೂರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಐವನ್, ಅಭಿವೃದ್ಧಿ ಕೆಲಸಕ್ಕಾಗಿ ದರ ಏರಿಕೆ ಎಂದು ನಳಿನ್ ಕುಮಾರ್ ಕಟೀಲು ಪೆದ್ದುತನದ ಹೇಳಿಕೆ ನೀಡುತ್ತಿದ್ದಾರೆ. ಜನರನ್ನು ಕಷ್ಟಕ್ಕೊಡ್ಡಿ ಇವರು ಮಾಡುವ ಅಭಿವೃದ್ಧಿಯಾದರೂ ಏನು ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.

ಮಾಜಿ ಶಾಸಕಿ ಶಕುಂತಳಾ ಶಟ್ಟಿ ಮಾತನಾಡಿ, ಹಿಂದಿನ ಸರ್ಕಾರದ ಸಾಲ ತೀರಿಸಲು ಇಂಧನ ಬೆಲೆ ಏರಿಕೆ ಮಾಡಲಾಗಿದೆ ಎನ್ನುವ ಕೇಂದ್ರ ಸರ್ಕಾರವು ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್, ಬಿಎಸ್ಸೆನ್ನೆಲ್‌ಗಳನ್ನು ಯಾಕಾಗಿ ಮಾರಾಟ ಮಾಡಿದ್ದೀರಿ ಎಂಬುದನ್ನೂ ತಿಳಿಸಬೇಕು ಎಂದು ಒತ್ತಾಯಿಸಿದರು.

ದರ್ಬೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ರಾಜ್ಯ ನಿಯೋಜಿತ ಅಧ್ಯಕ್ಷ ಮುಹಮ್ಮದ್ ನಲಪಾಡ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಹೊರೆ ಕೇವಲ ಅದಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ದಿನಬಳಕೆ ವಸ್ತುಗಳ ಬೆಲೆಯಲ್ಲೂ ಪರಿಣಾಮ ಬೀರುತ್ತದೆ. ದರ ಇಳಿಕೆಯಾಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಸೈಕಲ್ ಜಾಥಾವು ನೆಹರೂ ನಗರದಿಂದ ಆರಂಭಗೊಂಡು ಪುತ್ತೂರು ಮುಖ್ಯರಸ್ತೆಯಲ್ಲಿ ಸಂಚರಿಸಿ ದರ್ಬೆಯಲ್ಲಿ ಕೊನೆಗೊಂಡಿತು.

ಕಾಂಗ್ರೆಸ್ ಜಿಲ್ಲಾ ವಕ್ತಾರ ಮುಹಮ್ಮದ್ ಬಡಗನ್ನೂರು, ಜಿಲ್ಲಾ ಸೇವಾ ದಳದ ಅಧ್ಯಕ್ಷ ಜೋಕಿಂ ಡಿಸೋಜ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ವಿಶಾಲಾಕ್ಷಿ ಬನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ ಯು.ಟಿ.ತೌಸೀಫ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಸ್ವಾಗತಿಸಿ, ವಂದಿಸಿದರು.


SHARE THIS

Author:

0 التعليقات: