Friday, 30 July 2021

ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಬೊಮ್ಮಾಯಿ


ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ನವದೆಹಲಿ: ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಸಲ ದೆಹಲಿಗೆ ತೆರಳಿರುವ ಬಸವರಾಜ ಬೊಮ್ಮಾಯಿ, ಅಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಆಗಿ ಚರ್ಚೆ ಮಾಡಿದ್ದಾರೆ. ಮೋದಿ-ಬೊಮ್ಮಾಯಿ ಅವರ ಈ ಭೇಟಿಯಿಂದ ಸಚಿವಾಕಾಂಕ್ಷಿಗಳ ಎದೆಬಡಿತ ಹೆಚ್ಚಾಗಿದ್ದರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಯವರಲ್ಲಿ ಸಂತಸ ಉಂಟಾಗಿದೆ.

ಪ್ರಧಾನಿ ಮೋದಿಯವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ, ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಜೊತೆಗೆ ಕಲಬುರಗಿಯ ಇಎಸ್‌ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಪ್ರಾದೇಶಿಕ ಏಮ್ಸ್ ಮಾದರಿಯ ಸಂಸ್ಥೆಯನ್ನಾಗಿ ಉನ್ನತೀಕರಿಸುವಂತೆ ಕೋರಿಕೊಂಡರು.

ಇದೇ ವೇಳೆ ನೂತನ ಮುಖ್ಯಮಂತ್ರಿಯವರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ಕರ್ನಾಟಕದ ಅಭಿವೃದ್ಧಿಗೆ ಎಲ್ಲ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮೋದಿಯನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ, ಮತ್ತಷ್ಟು ಸಂಗತಿಯನ್ನು ಹೊರಹಾಕಿದರು. ಇದೇ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್​ ಷಾ, ರಾಜನಾಥ್ ಸಿಂಗ್​ ಮುಂತಾದವರನ್ನೂ ಭೇಟಿಯಾಗಿದ್ದಾರೆ.

ಸಂಪುಟ ರಚನೆ ಸಂಬಂಧ ಇನ್ನೊಮ್ಮೆ ದೆಹಲಿಗೆ ಬರುವ ಸಾಧ್ಯತೆ ಜಾಸ್ತಿ ಇದೆ. ಸದ್ಯ ರಾಜ್ಯದ ನೆರೆ ಪರಿಸ್ಥಿತಿ, ಕೋವಿಡ್ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ಹೇಳಿದ್ದೇನೆ ಎಂದು ತಿಳಿಸಿದ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಕುರಿತು ಕೂಡ ಮಾತನಾಡಿದರು. ಅಲ್ಲದೆ ಇನ್ನೊಂದು ವಾರದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾಹಿತಿಯನ್ನೂ ನೀಡಿದರು. ಇದರಿಂದ ಸಚಿವ ಸ್ಥಾನಾಕಾಂಕ್ಷಿಗಳ ಎದೆಬಡಿತ ಹೆಚ್ಚಾದಂತಾಗಿದೆ.SHARE THIS

Author:

0 التعليقات: