ಭೋಪಾಲ್ : ಕ್ಷುಲ್ಲಕ ಕಾರಣಕ್ಕೆ ವಿವಾಹಿತ ಮಹಿಳೆಗೆ ಹಲ್ಲೆ
ಭೋಪಾಲ್ : ಮಾವನ ಮನೆಯನ್ನು ತೊರೆದ ಕಾರಣಕ್ಕೆ 19 ವರ್ಷದ ವಿವಾಹಿತ ಯುವತಿಯನ್ನು ತಂದೆ ಹಾಗೂ ಸೋದರ ಸಂಬಂಧಿಗಳು ಸಾರ್ವಜನಿಕರ ಎದುರೇ ಕೂದಲು ಎಳೆದುಕೊಂಡು ಬಂದು ಮರಕ್ಕೆ ಕಟ್ಟಿಹಾಕಿ ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕೇವಲ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಯುವತಿ ಮಾವನ ಮನೆ ಬಿಟ್ಟು ಬಂದದ್ದೇ ತಂದೆಯ ಕೋಪಕ್ಕೆ ಕಾರಣ ಎನ್ನಲಾಗಿದೆ.
ಹಲ್ಲೆ ಮಾಡುತ್ತಿರುವವರು ಮೊಲೈಲ್ ಫೋನ್ನಲ್ಲಿ ಇಡೀ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದು, "ಅಳುವುದು ನಿಲ್ಲಿಸು. ಇನ್ನು ವಾಪಾಸು ಬರುತ್ತಿಯಾ ?" ಎಂದು ಕೋಪದಿಂದ ಪ್ರಶ್ನಿಸುತ್ತಿರುವುದು ಕೇಳಿಸುತ್ತಿದೆ. ಮತ್ತೊಬ್ಬ ವ್ಯಕ್ತಿ ಅಮಾನುಷವಾಗಿ ಥಳಿಸುತ್ತಿರುವುದು ಕಾಣಿಸುತ್ತಿದೆ. ಹೊಡೆಯುತ್ತಿದ್ದ ಬಡಿಗೆ ಮುರಿದ ಬಳಿಕವಷ್ಟೇ ಹೊಡೆಯುವುದು ನಿಲ್ಲಿಸಿದ್ದಾನೆ.
ಇನ್ನೊಂದು ವೀಡಿಯೊದಲ್ಲಿ ಕೆಲ ವ್ಯಕ್ತಿಗಳು ಯುವತಿಯನ್ನು ಮರಕ್ಕೆ ಕಟ್ಟಿಹಾಕಿ ವಿಕೃತವಾಗಿ ನಗುತ್ತಿರುವುದು ಕಾಣಿಸುತ್ತಿದೆ. ಪುಟ್ಟ ಬಾಲಕಿ ಸೇರಿದಂತೆ ಈ ಘಟನೆಯನ್ನು ನೋಡುತ್ತಾ ನಿಂತಿರುವುದೂ ಕಾಣಿಸುತ್ತಿದೆ. ಆದರೆ ಯಾರು ಕೂಡ ಆಕೆಯ ನೆರವಿಗೆ ಬಂದಿಲ್ಲ.
ಬುಡಕಟ್ಟು ಜನಾಂಗಕ್ಕೆ ಸೇರಿದ ಯುವತಿ ಅಲಿರಾಜಪುರದಲ್ಲಿರುವ ತನ್ನ ಸೋದರಮಾವನ ಮನೆಗೆ ಹೋಗಿದ್ದು, ಆಕೆಯನ್ನು ಜೂ 28ರಂದು ಮನೆಯಿಂದ ಹೊರಗೆಳೆದು ಚಿತ್ರಹಿಂಸೆ ನೀಡಲಾಗಿದೆ. ಘಟನೆಯ ಹಲವು ವೀಡಿಯೊಗಳು ವೈರಲ್ ಆದ ಬಳಿಕ ಪೊಲೀಸರು ಯುವತಿಯ ಹೇಳಿಕೆ ಪಡೆದು ತಂದೆ ಹಾಗೂ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 التعليقات: