Sunday, 11 July 2021

ಉತ್ತರ ಪ್ರದೇಶದಲ್ಲಿ ಪತ್ರಕರ್ತನನ್ನು ಸಾರ್ವಜನಿಕ ಸ್ಥಳದಲ್ಲಿ ಥಳಿಸಿದ ಐಎಎಸ್ ಅಧಿಕಾರಿ:ವೀಡಿಯೊ ವೈರಲ್


 ಉತ್ತರ ಪ್ರದೇಶದಲ್ಲಿ ಪತ್ರಕರ್ತನನ್ನು ಸಾರ್ವಜನಿಕ ಸ್ಥಳದಲ್ಲಿ ಥಳಿಸಿದ ಐಎಎಸ್ ಅಧಿಕಾರಿ:ವೀಡಿಯೊ ವೈರಲ್

ಲಕ್ನೋ: ಉತ್ತರಪ್ರದೇಶದಲ್ಲಿ ಶನಿವಾರ ನಡೆದ ಸ್ಥಳೀಯ ಚುನಾವಣೆ ವೇಳೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯೊಬ್ಬರು ಟಿವಿ ವರದಿಗಾರನೊಬ್ಬನನ್ನು ಸಾರ್ವಜನಿಕವಾಗಿ ಬೆನ್ನಟ್ಟಿ ಥಳಿಸಿರುವ ನಂಬಲಸಾಧ್ಯ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉನ್ನಾವೊದ ಮುಖ್ಯ ಅಭಿವೃದ್ಧಿ ಅಧಿಕಾರಿ ಅಥವಾ ಸಿಡಿಒ ದಿವ್ಯಾಂಶು ಪಟೇಲ್ ಅವರು ಟಿವಿ  ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.  ಸ್ಥಳೀಯ ಕೌನ್ಸಿಲ್ ಸದಸ್ಯನನ್ನು ಅಪಹರಿಸಿ ಮತದಾನ ಮಾಡದಂತೆ ತಡೆದಿರುವ ದೃಶ್ಯವನ್ನು ಟಿವಿ ವರದಿಗಾರ ಸೆರೆ ಹಿಡಿದಿರುವುದಕ್ಕೆ ಹಲ್ಲೆ ನಡೆಸಲಾಗಿದೆ  ಎನ್ನಲಾಗಿದೆ. ಘಟನೆ ಕುರಿತು ಅಧಿಕಾರಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ವ್ಯಾಪಕ ಖಂಡನೆಗೆ ಕಾರಣವಾಗಿದೆ.

"ನಾವು ಎಲ್ಲಾ ಪತ್ರಕರ್ತರೊಂದಿಗೆ ಮಾತುಕತೆ ನಡೆಸಿದ್ದೇವೆ. ಹಲ್ಲೆಗೊಳಗಾದ ಪತ್ರಕರ್ತನಿಂದ ನಮಗೆ ಲಿಖಿತ ದೂರು ಬಂದಿದೆ. ಪ್ರಕರಣದಲ್ಲಿ ನ್ಯಾಯಯುತ ಕ್ರಮ ಕೈಗೊಳ್ಳಲಾಗುವುದು ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ" ಎಂದು ಉನ್ನಾವೊ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಉತ್ತರ ಪ್ರದೇಶದ ಕನಿಷ್ಠ 17 ಜಿಲ್ಲೆಗಳಲ್ಲಿ ಬ್ಲಾಕ್ ಪಂಚಾಯತ್ ಮುಖ್ಯಸ್ಥರನ್ನು ಆಯ್ಕೆ ಮಾಡಲು ನಡೆದ  ಮತದಾನದ ವೇಳೆ  ಘರ್ಷಣೆ ಮತ್ತು ಹಿಂಸಾಚಾರವು ನಡೆದಿದೆ. ಆದರೆ ಬಿಜೆಪಿ ತನಗೆ  "ಐತಿಹಾಸಿಕ ವಿಜಯ" ಲಭಿಸಿದೆ ಎಂದು ಹೇಳಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಮತದಾನದಲ್ಲಿ ಅಕ್ರಮ ನಡೆದಿದೆ ಎಂದು  ಆರೋಪಿಸಿವೆ .


SHARE THIS

Author:

0 التعليقات: