Sunday, 18 July 2021

ಭಾರತದ ಪತ್ರಕರ್ತರು, ರಾಜಕಾರಣಿಗಳ ಮೇಲೆ ಇಸ್ರೇಲ್‌ನ ಗೂಢಚರ್ಯೆ ತಂತ್ರಾಂಶ "ಪೆಗಾಸಸ್" ಕಣ್ಣು


ಭಾರತದ ಪತ್ರಕರ್ತರು, ರಾಜಕಾರಣಿಗಳ ಮೇಲೆ ಇಸ್ರೇಲ್‌ನ ಗೂಢಚರ್ಯೆ ತಂತ್ರಾಂಶ "ಪೆಗಾಸಸ್" ಕಣ್ಣು

ನವದೆಹಲಿ: ಪೆಗಾಸಸ್ ತಂತ್ರಾಂಶ ಬಳಸಿಕೊಂಡು ಭಾರತದ ಪ್ರಮುಖ ಪತ್ರಕರ್ತರು, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಮೇಲೆ ಕಣ್ಣಿಟ್ಟಿರುವುದು ಬೆಳಕಿಗೆ ಬಂದಿರುವುದಾಗಿ "ದಿ ವೈರ್" ವರದಿ ಮಾಡಿದೆ.

ಭಾರತದ 40 ಪತ್ರಕರ್ತರು ಹಾಗೂ ಭೀಮಾ ಕೋರೆಗಾಂವ್ ಪ್ರಕರಣಗಳ ಆರೋಪಿಗಳು ಸೇರಿದಂತೆ ಹನ್ನೆರಡು ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಕೆಲವು ಸಚಿವರು, ವಿರೋಧ ಪಕ್ಷಗಳ ನಾಯಕರು, ಕಾನೂನು ಕ್ಷೇತ್ರದವರು ಉದ್ಯಮಿಗಳು, ಅಧಿಕಾರಿಗಳು, ವಿಜ್ಞಾನಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿ ಸುಮಾರು 300 ಭಾರತೀಯರ ಮೊಬೈಲ್‌ಗಳು ಹ್ಯಾಕ್ ಆಗಿವೆ ಎಂದು "ದಿ ವೈರ್" ವರದಿ ತಿಳಿಸಿದೆ. ಫೋನ್‌ಗಳಲ್ಲಿ ನಡೆಸಿದ ವಿಧಿ ವಿಜ್ಞಾನ ಪರೀಕ್ಷೆಗಳು ಪೆಗಾಸಸ್ ತಂತ್ರಾಂಶ ಬಳಕೆಯನ್ನು ಬಹಿರಂಗಪಡಿಸಿವೆ.

ಹಿಂದೂಸ್ತಾನ್ ಟೈಮ್ಸ್‌, ಇಂಡಿಯಾ ಟುಡೇ, ನೆಟ್‌ವರ್ಕ್ 18, ದಿ ಹಿಂದೂ, ಇಂಡಿಯನ್‌ ಎಕ್ಸ್ಪ್ರೆಸ್‌ನಂಥ ದೊಡ್ಡ ಮಾಧ್ಯಮ ಸಂಸ್ಥೆಗಳ ಪತ್ರಕರ್ತರ ಮಾಹಿತಿಯು ಸೋರಿಕೆಯಾದ ದತ್ತಾಂಶ ವರದಿಯಲ್ಲಿ ಕಂಡುಬಂದಿದೆ.

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದ ಎಂಟು ಕಾರ್ಯಕರ್ತರು, ವಕೀಲರು ಹಾಗೂ ಶಿಕ್ಷಣ ತಜ್ಞರ ಮೊಬೈಲ್‌ಗಳು ಹ್ಯಾಕ್ ಆಗಿರುವುದಾಗಿ ತಿಳಿದುಬಂದಿದೆ. ಪತ್ರಕರ್ತರ ಪೈಕಿ ಸುಶಾಂತ್ ಸಿಂಗ್, ಜೆ. ಗೋಪಿಕೃಷ್ಣನ್, ಶಿಶಿರ್ ಗುಪ್ತಾ, ರಿತಿಕಾ ಛೋಪ್ರಾ, ಪ್ರಶಾಂತ್ ಝಾ, ಪ್ರೇಮ್ ಶಂಕರ್ ಝಾ, ಸ್ವಾತಿ ಚತುರ್ವೇದಿ, ರಾಹುಲ್ ಸಿಂಗ್, ಮುಜಾಮಿಲ್ ಜಲೀಲ್, ಇಫ್ತಿಯಾರ್ ಗಿಲಾನಿ, ಸಂದೀಪ್ ಉನ್ನಿತಾನ್, ಸಿದ್ಧಾರ್ಥ್ ವರದರಾಜನ್ ಹಾಗೂ ಎಂ.ಕೆ. ವೇಣು ಅವರ ಹೆಸರುಗಳು ಈ ಪಟ್ಟಿಯಲ್ಲಿರುವುದಾಗಿ ತಿಳಿದುಬಂದಿದೆ.

ಆದರೆ, ಅಕ್ಟೋಬರ್ 2019ರಲ್ಲಿ ಇದೇ ರೀತಿ ಮಾಹಿತಿ ಸುದ್ದಿಯಾಗಿತ್ತು. ಇದರಲ್ಲಿ ಸತ್ಯಾಂಶವಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಪೆಗಾಸಸ್ ಇಸ್ರೇಲ್‌ನ ಎನ್‌ಎಸ್‌ಒ ಅಭಿವೃದ್ಧಿಪಡಿಸಿದ ಗೂಢಚರ್ಯೆ ತಂತ್ರಾಂಶವಾಗಿದ್ದು, ಕೆಲವು ಲಿಂಕ್‌ಗಳನ್ನು ಮೊಬೈಲ್‌ಗಳಿಗೆ ಕಳುಹಿಸುವ ಮೂಲಕ ಫೋನ್‌ನಲ್ಲಿನ ಮಾಹಿತಿಯನ್ನು ಹ್ಯಾಕ್ ಮಾಡಲಾಗುತ್ತದೆ.SHARE THIS

Author:

0 التعليقات: