ಡಿಕೆಶಿ ಪಾಪದ ಮಾತಿನಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ: ಸಚಿವ ಮಾಧುಸ್ವಾಮಿ
ಉಡುಪಿ: ‘ವ್ಯಾಕ್ಸಿನ್ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ಟೀಕೆ ಮಾಡಿದರೆ ನಿಮಗೆ (ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್) ಒಳ್ಳೆದಾಗಲ್ಲ. ದೇಶದಲ್ಲಿ 80 ಕೋಟಿ ಜನಕ್ಕೆ ಉಚಿತ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರಕಾರದ ಈ ನಿರ್ಧಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ರಾಜ್ಯ ಸರಕಾರ ವ್ಯಾಕ್ಸಿನ್ಗಾಗಿ 2000 ಕೋಟಿ ರೂ. ತೆಗೆದಿರಿಸಿದೆ. ಡಿಕೆಶಿ ಪಾಪದ ಮಾತಿನಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂದು ಉಡುಪಿ ಸಣ್ಣ ನೀರಾವರಿ ಸಚಿವ ಕೆ.ಸಿ.ಮಾಧುಸ್ವಾಮಿ ಟೀಕಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟೀಕೆ ಮಾಡುವುದನ್ನು ಮಾಡಿ, ಅದು ವಿರೋಧ ಪಕ್ಷದವರ ಕರ್ತವ್ಯ. ವಿರೋಧ ಪಕ್ಷದಲ್ಲಿ ನನಗಿಂತ ಚೆನ್ನಾಗಿ ಕೆಲಸ ಮಾಡಿದವರು ಯಾರು ಇಲ್ಲ. ನೈಸರ್ಗಿಕ ಆಪತ್ತಿನ ಕಾಲದಲ್ಲಿ ಎಲ್ಲವನ್ನು ಟೀಕೆ ಮಾಡಬಾರದು. ವ್ಯಾಕ್ಸಿನ್ ಉತ್ಪಾದನೆ ಮಾಡಲು ಕಂಪೆನಿಯವರಿಗೂ ಕಾಲಾವಕಾಶ ಬೇಕು. ಮುಂದಿನ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಲಸಿಕೆ ಅಭಿಯಾನ ಮುಗಿಯುತ್ತದೆ. ಇದು ಡಿಕೆಶಿ ಅವರ ಬದುಕಿನ ಪ್ರಶ್ನೆ ಹೀಗಾಗಿ ವಿರೋಧ ಮಾಡುತ್ತಾರೆ ಎಂದರು.
ರಮೇಶ್ ಜಾರಕಿಹೊಳಿ ಬಗ್ಗೆ ಅನುಕಂಪ
ರಮೇಶ್ ಜಾರಕಿಹೊಳಿ ರಾಜಕೀಯ ನಿರ್ಧಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಜಾರಕಿಹೊಳಿ ಅವರಿಗೆ ಸರಕಾರ ಮತ್ತು ಪಕ್ಷದ ಕಡೆಯಿಂದ ಏನು ತೊಂದರೆ ಮಾಡಿಲ್ಲ. ಆಕಸ್ಮಿಕವಾದ ಘಟನೆಗೆ ಅವರು ಬಲಿಯಾಗಿದ್ದಾರೆ. ನಾವೆಲ್ಲ ಅವರ ಬಗ್ಗೆ ಅನುಕಂಪ ಇಟ್ಟುಕೊಂಡಿದ್ದೇವೆ. ಇದೊಂದು ಕಾನೂನಾತ್ಮಕ ಮತ್ತು ನೈತಿಕ ವಿಚಾರವಾಗಿದೆ. ನೈತಿಕವಾಗಿ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.
ಕಾನೂನಾತ್ಮಕವಾಗಿಯೂ ಯಾವುದೇ ಸಮಸ್ಯೆ ಇದೆ ಅನಿಸಲ್ಲ. ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆ ಹೆಣ್ಣುಮಗಳ ವರ್ತನೆ ನೋಡಿ ದರೆ ಇಚ್ಛೆಪಟ್ಟು ಹೋಗಿದ್ದಾರೆ ಎಂಬ ಭಾವನೆ ಬರುತ್ತದೆ. ಹಾಗಾಗಿ ಜಾರಕಿಹೊಳಿಗೆ ಶಿಕ್ಷೆ ಆಗಲಾರದು ಎಂಬುದು ನಮ್ಮ ಅಭಿಪ್ರಾಯ. ಎಲ್ಲವನ್ನು ಎದುರಿಸಲೇಬೇಕು. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಯಾರನ್ನು ದೂರಲು ಸಾಧ್ಯವಿಲ್ಲ. ಅವರು ಶಾಸಕ ಸ್ಥಾನಕ್ಕೆ ರಾಜೀ ನಾಮೆ ಕೊಡಬೇಕಾಗಿಲ್ಲ ಎಂದರು.
ಪಕ್ಷ ಬಿಟ್ಟವರು ವಾಪಸ್ ಬರುವ ಬಗ್ಗೆ ಡಿಕೆಶಿ ನೀಡಿರುವ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಗೆ ಯಾರಾದರೂ ಬರುವುದಿದ್ದರೆ ಬರಲಿ. ಬೇರೆ ಪಕ್ಷದಿಂದ ಬಿಜೆಪಿಗೆ ಬರುವುದಾದರೆ ಸ್ವಾಗತ. ವಿಸ್ತರಣೆ ರಾಜಕೀಯ ಎಲ್ಲಾ ಪಕ್ಷಗಳ ಉದ್ದೇಶ ಆಗಿರುತ್ತದೆ. ಕಾಂಗ್ರೆಸ್ ನಿಂದ ಯಾರಾ ದರೂ ಬರುವವರಿದ್ದರು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದರು.
0 التعليقات: