ಪ್ರಧಾನಿ ಮೋದಿಯವರ ತೆರಿಗೆ ಭಯೋತ್ಪಾದನೆ
ಸಿದ್ದರಾಮಯ್ಯ - ಮಾಜಿ ಮುಖ್ಯಮಂತ್ರಿ
ಬಹುಶಃ ಜಗತ್ತಿನ ಯಾವ ದೇಶದಲ್ಲೂ ಭಾರತದಲ್ಲಿರುವಷ್ಟು ಕಾರ್ಪೊರೇಟ್ ಭ್ರಷ್ಟಾಚಾರ ಇರಲಿಕ್ಕಿಲ್ಲ. ಅದಾನಿ, ಅಂಬಾನಿಗಳು ಕಣ್ಣು ಹಾಕಿದ್ದೆಲ್ಲ ಅವರ ಪಾಲಾಗುತ್ತಿವೆ. ಅವರಿಗೆ ಬೇಕಾದ ಹಾಗೆ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಹೊಸ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಅಗತ್ಯ ವಸ್ತುಗಳ ಕಾಯ್ದೆ, ಕೃಷಿ ಕಾಯ್ದೆಗಳ ತಿದ್ದುಪಡಿಗಳ ವಿರುದ್ಧ ದೇಶಕ್ಕೆ ಅನ್ನ ಕೊಡುವ ರೈತರು ಕಳೆದ 200ಕ್ಕೂ ಅಧಿಕ ದಿನಗಳಿಂದ ದಿಲ್ಲಿಯ ಬಳಿ ಧರಣಿ ನಡೆಸುತ್ತಿದ್ದಾರೆ. ಅವರನ್ನು ಕ್ಯಾರೆ ಅನ್ನದೆ ಸರಕಾರ ಆಡಳಿತ ನಡೆಸುತ್ತಿದೆ. ಇಂಥ ಸರಕಾರಕ್ಕೆ ಲಜ್ಜೆ, ಪ್ರಜಾತಂತ್ರದಲ್ಲಿ ನಂಬಿಕೆ ಇದೆ ಎನ್ನಲು ಸಾಧ್ಯವೇ?
ಅದಾನಿ ಏಶ್ಯದ ಎರಡನೇ ದೊಡ್ಡ ಶ್ರೀಮಂತನಾಗಿರುವುದು ನಮ್ಮ ಜನರು ಬೆವರು, ರಕ್ತ ಹರಿಸಿ ಬ್ಯಾಂಕುಗಳಲ್ಲಿ ಇಟ್ಟ ಹಣದಿಂದ. ಜನ ತಮ್ಮ ದುಡಿಮೆಯ ಒಂದಷ್ಟು ಉಳತಾಯವನ್ನು ಮಕ್ಕಳ ಓದಿಗೆ, ಮಗಳ ಮದುವೆಗೆಂದು ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟರು. ಈ ಹಣವನ್ನು ಸಾಲವಾಗಿ ಬ್ಯಾಂಕ್ಗಳಿಂದ ಪಡೆದ ಅದಾನಿ ಮುಂತಾದವರು ಅದನ್ನು ವಾಪಸ್ ಕಟ್ಟದೆ ಎನ್ಪಿಎ ಮಾಡಿಸಿ, ಮನ್ನಾ ಮಾಡಿಸಿಕೊಂಡರು. ಬಳಿಕ ನಮ್ಮದೇ ದೇಶದ ಜನರು ಅನೇಕ ದಶಕಗಳಿಂದ ಕಟ್ಟಿದ್ದ ವಿಮಾನ ನಿಲ್ದಾಣ, ಬಂದರುಗಳು, ಆಹಾರ ನಿಗಮದ ಗೋಡೌನುಗಳು ಹಾಗೂ ದೇಶದ ಖನಿಜ ಸಂಪತ್ತು ಮುಂತಾದವುಗಳನ್ನು ಬಿಡಿಗಾಸಿಗೆ ಕೊಂಡುಕೊಳ್ಳುವ ಮೂಲಕ ಶ್ರೀಮಂತನಾಗುತ್ತಿದ್ದಾರೆೆ. ಯಾವ ದೇಶದಲ್ಲಿ ಇಂಥ ಲೂಟಿಯನ್ನು ಸಹಿಸಲು ಸಾಧ್ಯ ಹೇಳಿ? ಇಂತಹ ಲೂಟಿಗೆ ಸಹಕರಿಸುತ್ತಿರುವ ಪ್ರಧಾನಿ ಮೋದಿಯವರು ಎಂದಾದರೂ ಈ ದೇಶವನ್ನು ಅಭಿವೃದ್ಧಿ ಮಾಡಲು ಸಾಧ್ಯವೇ? ಖಾಸಗಿ ಬಂಡವಾಳಿಗರು ದೇಶಕ್ಕೆ ನ್ಯಾಯಯುತವಾಗಿ ಕಟ್ಟಬೇಕಾದ ತೆರಿಗೆಯನ್ನು ತೆರಿಗೆ ಭಯೋತ್ಪಾದನೆ ಎನ್ನುವ ಪ್ರಧಾನ ಮಂತ್ರಿಗಳು ದೇಶವನ್ನು ಸಂಪೂರ್ಣ ವಿನಾಶ ಮಾಡುವುದರಲ್ಲಿ, ಜನರನ್ನು ಭಿಕ್ಷುಕರನ್ನಾಗಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.
0 التعليقات: