Friday, 30 July 2021

ಗಡಿ ಸಂಘರ್ಷ: ಅಸ್ಸಾಂ ಸಿಎಂ ವಿರುದ್ಧ ಮಿಜೋರಾಂ ಪೊಲೀಸರಿಂದ ಪ್ರಕರಣ


 ಗಡಿ ಸಂಘರ್ಷ: ಅಸ್ಸಾಂ ಸಿಎಂ ವಿರುದ್ಧ ಮಿಜೋರಾಂ ಪೊಲೀಸರಿಂದ ಪ್ರಕರಣ

ಗುವಾಹತಿ: ಎರಡು ಈಶಾನ್ಯ ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆಯೇ ಮಿಜೋರಾಂ ಪೊಲೀಸರು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ಹಿಮಾಂತ ಬಿಸ್ವ ಶರ್ಮಾ ಆಡಳಿತದ ಆರು ಮಂದಿ ಉನ್ನತ ಅಧಿಕಾರಿಗಳು ಹಾಗೂ 200 ಮಂದಿ ಅನಾಮಧೇಯ ಪೊಲೀಸ್ ಸಿಬ್ಬಂದಿಯ ಹೆಸರನ್ನೂ ಪ್ರಕರಣದಲ್ಲಿ ಸೇರಿಸಲಾಗಿದೆ.

ಪ್ರಕರಣದಲ್ಲಿ ಹೆಸರಿಸಿರುವ ಪೊಲೀಸ್ ಅಧಿಕಾರಿಗಳ ಪೈಕಿ ಅಸ್ಸಾಂ ಇನ್‌ಸ್ಪೆಕ್ಟರ್ ಜನರಲ್, ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಹಾಗೂ ಪೊಲೀಸ್ ಅಧೀಕ್ಷಕರ ಹೆಸರೂ ಸೇರಿದೆ. ಕಚಾರ್ ಜಿಲ್ಲಾಧಿಕಾರಿ ಹೆಸರೂ ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಅಸ್ಸಾಂನ ಕಚಾರ್ ಗಡಿಗೆ ಹೊಂದಿಕೊಂಡಿರುವ ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ವೈರೆಂಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮುನ್ನ ಅಸ್ಸಾಂ ಪೊಲೀಸರು ಮಿಜೋರಾಂ ಸಂಸದ ಸೇರಿದಂತೆ ಹಲವು ಮಂದಿ ಗಣ್ಯರ ವಿರುದ್ಧ ಸಮನ್ಸ್ ಜಾರಿ ಮಾಡಿದ್ದರು. ಸಮನ್ಸ್ ನೀಡುವ ಸಲುವಾಗಿ ಪೊಲೀಸರು ಹೊಸದಿಲ್ಲಿಯಲ್ಲಿ ಸಂಸದರ ನಿವಾಸಕ್ಕೆ ಭೇಟಿ ನೀಡಿದ್ದರು. ಹಲವು ದಶಕಗಳಿಂದ ಉಭಯ ರಾಜ್ಯಗಳ ನಡುವೆ ಗಡಿ ವಿವಾದವಿದ್ದರೂ, ಈ ವಾರ ಅದು ಉಲ್ಬಣಗೊಂಡಿತ್ತು.

ಕಳೆದ ಸೋಮವಾರ ಈ ಎರಡು ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದು, ಆರು ಮಂದಿ ಅಸ್ಸಾಂ ಪೊಲೀಸರು ಹತರಾಗಿದ್ದರು. ಎರಡೂ ಕಡೆಗಳ ಪೊಲೀಸರಿಗೆ ಗಾಯಗಳಾಗಿದ್ದವು. ಹಿಂಸೆಗೆ ಪರಸ್ಪರರ ಮೇಲೆ ದೋಷಾರೋಪ ಮಾಡಲಾಗುತ್ತಿದೆ.


SHARE THIS

Author:

0 التعليقات: