ದೇಶದಲ್ಲಿ ನಾಲ್ಕು ಲಕ್ಷ ದಾಟಿದ ಕೋವಿಡ್ ಸಾವು; ಅಮೆರಿಕ ಮತ್ತು ಬ್ರೆಝಿಲ್ ಬಳಿಕ ನಾಲ್ಕು ಲಕ್ಷ ಕೋವಿಡ್ ಸಾವು ಸಂಭವಿಸಿದ ಮೂರನೇ ದೇಶವಾಗಿ ಭಾರತ
ಹೊಸದಿಲ್ಲಿ: ಭಾರತದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಗುರುವಾರ ನಾಲ್ಕು ಲಕ್ಷದ ಗಡಿ ದಾಟಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಅಮೆರಿಕ ಮತ್ತು ಬ್ರೆಝಿಲ್ ಬಳಿಕ ನಾಲ್ಕು ಲಕ್ಷ ಕೋವಿಡ್ ಸಾವು ಸಂಭವಿಸಿದ ಮೂರನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ. ಮೆಕ್ಸಿಕೋ 2 ಲಕ್ಷಕ್ಕಿಂತ ಅಧಿಕ ಕೋವಿಡ್ ಸಾವು ದಾಖಲಿಸಿದ ಇನ್ನೊಂದು ದೇಶವಾಗಿದೆ.
ಇಡೀ ವಿಶ್ವದಲ್ಲಿ ಅತ್ಯಧಿಕ ಕೋವಿಡ್ ಸಾವು (6 ಲಕ್ಷ) ಅಮೆರಿಕದಲ್ಲಿ ಸಂಭವಿಸಿದ್ದು, ಬ್ರೆಝಿಲ್ 5.2 ಲಕ್ಷದೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತ ನಾಲ್ಕು ಲಕ್ಷ ಸಾವಿನೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ 2.3 ಲಕ್ಷ ಸಾವು ಸಂಭವಿಸಿದ ಮೆಕ್ಸಿಕೊ ನಾಲ್ಕನೇ ಸ್ಥಾನದಲಿದೆ. ವಿಶ್ವದಲ್ಲಿ ಪೆರು, ರಶ್ಯ, ಬ್ರಿಟನ್, ಇಟೆಲಿ, ಫ್ರಾನ್ಸ್ ಮತ್ತು ಕೊಲಂಬಿಯಾ ಒಂದು ಲಕ್ಷಕ್ಕಿಂತ ಹೆಚ್ಚು ಕೋವಿಡ್ ಸಾವು ಕಂಡಿವೆ.
ಭಾರತದಲ್ಲಿ ಪ್ರತಿ 10 ಲಕ್ಷ ಮಂದಿಯ ಪೈಕಿ ಮೃತಪಟ್ಟಿರುವವರ ಸಂಖ್ಯೆ 287 ಆಗಿದ್ದು, ಇದು ಇಡೀ ವಿಶ್ವದಲ್ಲೇ ಕನಿಷ್ಠ. ರಶ್ಯದಲ್ಲಿ ಇದು 1,000 ಆಗಿದ್ದು, ಫ್ರಾನ್ಸ್, ಮೆಕ್ಸಿಕೊ, ಅಮೆರಿಕ ಮತ್ತು ಬ್ರಿಟನ್ನಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ ಅಂದಾಜು 2,000 ಮಂದಿ ಮೃತಪಟ್ಟಿದ್ದಾರೆ. ಆದರೆ ಅತ್ಯಧಿಕ ಸಾವಿನ ಪ್ರಮಾಣ ದಾಖಲಾಗಿರುವುದು ಪೆರುವಿನಲ್ಲಿ. ಇಲ್ಲಿ ಪ್ರತಿ 10 ಲಕ್ಷ ಜನರಲ್ಲಿ 5,765 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಪೈಕಿ ಸಾವಿನ ದರ ಕೂಡಾ ಭಾರತದಲ್ಲಿ ಕನಿಷ್ಠ. ಪ್ರತಿ 1,000 ಮಂದಿ ಸೋಂಕಿತರ ಪೈಕಿ 13 ಮಂದಿ ಇಲ್ಲಿ ಮೃತಪಟ್ಟಿದ್ದಾರೆ.
ಆದರೆ ಏಶ್ಯದ ದೊಡ್ಡ ದೇಶಗಳ ಪೈಕಿ ಅತ್ಯಧಿಕ ಸಾವಿನ ಪ್ರಮಾಣ ಭಾರತದಲ್ಲಿ ದಾಖಲಾಗಿದೆ. ನೇಪಾಳ (ಪ್ರತಿ 10 ಲಕ್ಷ ಜನಸಂಖ್ಯೆಗೆ 308 ಸಾವು) ಹೊರತುಪಡಿಸಿದರೆ ಅತ್ಯಧಿಕ ದರ ದಾಖಲಾಗಿರುವುದು ಭಾರತದಲ್ಲಿ. ಫಿಲಿಫೀನ್ಸ್ ಮತ್ತು ಇಂಡೋನೇಶ್ಯದಲ್ಲಿ ಇದು ಪ್ರತಿ 10 ಲಕ್ಷಕ್ಕೆ 200ರಷ್ಟಾಗಿದೆ. ಮಲೇಶ್ಯ (160), ಶ್ರೀಲಂಕಾ (143), ಅಫ್ಘಾನಿಸ್ತಾನ (122) ನಂತರದ ಸ್ಥಾನಗಳಲ್ಲಿವೆ. ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ನಲ್ಲಿ ಈ ಪ್ರಮಾಣ 100ಕ್ಕಿಂತ ಕಡಿಮೆ.
0 التعليقات: