Tuesday, 13 July 2021

ನೋಟು ಮುದ್ರಣಾಲಯದಿಂದ 5 ಲಕ್ಷ ರೂ.ಕಳವು!


ನೋಟು ಮುದ್ರಣಾಲಯದಿಂದ 5 ಲಕ್ಷ ರೂ.ಕಳವು!

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಬಿಗಿ ಭದ್ರತೆ ಹೊಂದಿರುವ ಕರೆನ್ಸಿ ನೋಟು ಪ್ರೆಸ್ (ಸಿಎನ್ ಪಿ)ನಿಂದ ಅಪರಿಚಿತರು ಕಳೆದ 5 ತಿಂಗಳುಗಳಲ್ಲಿ 5 ಲಕ್ಷ ರೂ. ಮೌಲ್ಯದ ನೋಟುಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ನಾಸಿಕ್ ನ ಕರೆನ್ಸಿ ನೋಟು ಪ್ರೆಸ್ (ಸಿಎನ್ ಪಿ) ಭಾರತ ಸರಕಾರಕ್ಕೆ ಉನ್ನತ ಗುಣಮಟ್ಟದ ಬ್ಯಾಂಕ್ ನೋಟುಗಳನ್ನು ಮುದ್ರಿಸುತ್ತದೆ.

ಫೆಬ್ರವರಿ 12 ಹಾಗೂ ಜುಲೈ 12,2021ರ ನಡುವೆ ಅಪರಿಚಿತರು 500 ರೂ. ಮುಖಬೆಲೆಯ 5 ಲಕ್ಷ ರೂ.ಹಣವನ್ನು ಕದ್ದಿದ್ದಾರೆ ಎಂದು ಇಂಡಿಯಾ ಸೆಕ್ಯುರಿಟಿ ಪ್ರೆಸ್ ನ ವ್ಯವಸ್ಥಾಪಕ ದೂರು ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 5 ತಿಂಗಳುಗಳಿಂದ ನೋಟುಗಳು ಕಾಣೆಯಾಗುತ್ತಿವೆ ಎಂದು ಗೊತ್ತಾದ ತಕ್ಷಣವೇ ಆಂತರಿಕ ತನಿಖೆ ನಡೆಸಲಾಗಿದೆ. ಅ ಬಳಿಕ ಪೊಲೀಸರಿಗೆ ದೂರು ನೀಡಲಾಯಿತು ಎಂದು ಅಧಿಕಾರಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನೋಟು ಮುದ್ರಣಾಲಯವು ಉನ್ನತ ಮಟ್ಟದ ಭದ್ರತೆಯನ್ನು ಹೊಂದಿದೆ. ಹೀಗಿದ್ದರೂ ಕಳ್ಳತನ ನಡೆದಿರುವುದು ಮುದ್ರಣಾಲಯ ಹಾಗೂ ಪೊಲೀಸರನ್ನು ಆಘಾತಗೊಳಿಸಿದೆ.


 


SHARE THIS

Author:

0 التعليقات: