Monday, 12 July 2021

ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಭಾರಿ ಮಳೆ, ಸಿಡಿಲಿಗೆ 28 ಬಲಿ

 

ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ಭಾರಿ ಮಳೆ, ಸಿಡಿಲಿಗೆ 28 ಬಲಿ

ಹೊಸದಿಲ್ಲಿ : ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಭಾರಿ ಮಳೆ ಮತ್ತು ಸಿಡಿಲಿನ ಅಬ್ಬರಕ್ಕೆ 28 ಮಂದಿ ಬಲಿಯಾಗಿದ್ದಾರೆ. 10 ಆಡು ಹಾಗೂ ಹಸು ಸೇರಿದಂತೆ 13 ಪ್ರಾಣಿಗಳು ಕೂಡಾ ಸಿಡಿಲು ಬಡಿದು ಜೀವ ಕಳೆದುಕೊಂಡಿವೆ.

28 ಸಾವಿನ ಪೈಕಿ 18 ಸಾವು ರಾಜಸ್ಥಾನದಲ್ಲಿ ಸಂಭವಿಸಿದೆ. ರಾಜ್ಯದ ವಿವಿಧೆಡೆಗಳಲ್ಲಿ ಆರು ಮಕ್ಕಳು ಸೇರಿದಂತೆ 21 ಮಂದಿ ಸಿಡಿಲಿನಿಂದ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಜೈಪುರ, ಕೋಟಾ, ಝಾಲವಾರ ಮತ್ತು ಧೂಳ್‌ಪುರ ಜಿಲ್ಲೆಗಳಲ್ಲಿ ಮೃತಪಟ್ಟವರಲ್ಲಿ ಏಳೂ ಮಕ್ಕಳೂ ಸೇರಿದ್ದಾರೆ. ಜೈಪುರದ ಅಂಬರ್ ಕೋಟೆಯ ಬಳಿಯ ಬೆಟ್ಟದಲ್ಲಿ ವೀಕ್ಷಣಾ ಗೋಪುರವೊಂದರಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟರು ಎಂದು ತಿಳಿದುಬಂದಿದೆ.

ಝಾಲವಾರದ ಲಾಲ್‌ಗಾಂವ್ ಗ್ರಾಮದಲ್ಲಿ 23 ವರ್ಷದ ಕುರಿಗಾಹಿ ತಾರಾ ಸಿಂಗ್ ಭೀಲ್ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಎರಡು ಎಮ್ಮೆಗಳೂ ಸಾವಿಗೀಡಾಗಿವೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ರಾಜ್ಯಪಾಲ ಕಲರಾಜ್ ಮಿಶ್ರಾ ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಸಿಎಂ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಇಬ್ಬರು ಹದಿಹರೆಯದವರು ಸೇರಿದಂತೆ 10 ಮಂದಿ ಉತ್ತ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ. ಇನ್ನೊಂದು ಮಳೆ ಸಂಬಂಧಿ ಘಟನೆಯಲ್ಲಿ ಉತ್ತರಾಖಂಡದ ಗ್ರಾಮವೊಂದರಲ್ಲಿ ಎಂಟು ವರ್ಷದ ಬಾಲಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಭಾರಿ ಮಳೆಯಿಂದಾಗಿ ಭೂಕುಸಿತ ಹಾಗೂ ಮನೆ ಕುಸಿತದಿಂದಾಗಿ ಈ ದುರಂತ ಸಂಭವಿಸಿದೆ.


SHARE THIS

Author:

0 التعليقات: