Saturday, 17 July 2021

ಗಡಿಬೇಲಿಯ ಎಲ್ಲಾ ಸಂದುಗಳನ್ನೂ 2022ರೊಳಗೆ ಮುಚ್ಚಲಾಗುವುದು: ಅಮಿತ್ ಶಾ


 ಗಡಿಬೇಲಿಯ ಎಲ್ಲಾ ಸಂದುಗಳನ್ನೂ 2022ರೊಳಗೆ ಮುಚ್ಚಲಾಗುವುದು: ಅಮಿತ್ ಶಾ

ಹೊಸದಿಲ್ಲಿ: ಗಡಿಭಾಗದ ಬೇಲಿಯಲ್ಲಿರುವ ಎಲ್ಲಾ ಸಂದುಗಳನ್ನೂ 2022ರೊಳಗೆ ಮುಚ್ಚುವ ಮೂಲಕ ವ್ಯಾಪಕ ಭದ್ರತೆಯನ್ನು ಖಾತರಿಗೊಳಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುವ ಮೊದಲು, ದೇಶಕ್ಕೆ ರಾಷ್ಟ್ರೀಯ ಭದ್ರತಾ ನೀತಿಯ ಕೊರತೆಯಿತ್ತು. ಆದರೆ ಈಗ ಶತ್ರುಗಳಿಗೆ ಅವರ ಭಾಷೆಯಲ್ಲೇ ಉತ್ತರ ನೀಡಲಾಗುತ್ತಿದೆ. ನಾನು ಯಾವುದೇ ಉದಾಹರಣೆ ನೀಡಲು ಬಯಸುವುದಿಲ್ಲ, ಯಾಕೆಂದರೆ ನಾನು ಯಾವ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದವರು ಹೇಳಿದರು.

ಬೇಲಿಯಲ್ಲಿ ಸಂದುಗಳಿರುವುದನ್ನು ಯಾರೊಬ್ಬರೂ ಬಯಸುವುದಿಲ್ಲ. ಸುಮಾರು 200 ಕಿ.ಮೀ ಉದ್ದದ ಗಡಿಬೇಲಿಯಲ್ಲಿ ಸುಮಾರು 1.5 ಕಿ.ಮೀ ವ್ಯಾಪ್ತಿಯಲ್ಲಿ ಸಂದು ಇದ್ದರೆ, ಇಡೀ ಬೇಲಿಯೇ ನಿಷ್ಪ್ರಯೋಜಕವಾಗುತ್ತದೆ. ಆಡಳಿತ ಮಟ್ಟದಲ್ಲಿದ್ದ ತಡೆಯನ್ನು ನಿವಾರಿಸಿ, ನೆರೆಯ ದೇಶಗಳೊಂದಿಗೆ ಮಾತುಕತೆ ನಡೆಸಿ ಈ ಸಂದುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. 2022ರ ವೇಳೆಗೆ ನಮ್ಮ ಗಡಿಬೇಲಿಯಲ್ಲಿ ಯಾವುದೇ ಸಂದುಗಳಿರದು ಎಂದು ಶಾ ಹೇಳಿದರು.

ಅವರು ವಿಜ್ಞಾನಭವನದಲ್ಲಿ ಬಿಎಸ್ಎಫ್ ಆಯೋಜಿಸಿದ ಪದವಿ ಪ್ರದಾನ ಸಮಾರಂಭದಲ್ಲಿ ರುಸ್ತಮ್ ಜಿ ಸ್ಮಾರಕ ಉಪನ್ಯಾಸ ನೀಡಿದರು.

ಜಮ್ಮುವಿನಲ್ಲಿ ಇತ್ತೀಚೆಗೆ ನಡೆದ ಡ್ರೋನ್ ದಾಳಿಯನ್ನು ಉಲ್ಲೇಖಿಸಿದ ಶಾ, ಡಿಆರ್ಡಿಒ ಮತ್ತು ಇತರ ವಿಭಾಗಗಳು ಡ್ರೋನ್ನಿಂದ ಎದುರಾಗಬಹುದಾದ ಅಪಾಯಗಳನ್ನು ಎದುರಿಸುವ ಸೂಕ್ತ ರಕ್ಷಣಾ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಕೃತಕ ಬುದ್ಧಿಮತ್ತೆ ಮತ್ತು ರೊಬೊಟ್ ತಂತ್ರಜ್ಞಾನ ಬಳಸಿದ ಸವಾಲನ್ನು ನಾವು ಎದುರಿಸಬೇಕಾಗಿದೆ.

ಅತೀ ಶೀಘ್ರದಲ್ಲೇ ನಮ್ಮ ಗಡಿಯ ಭದ್ರತೆ ದೇಶೀಯವಾಗಿ ಅಭಿವೃದ್ಧಿಗೊಳಿಸಿದ ವ್ಯವಸ್ಥೆಯಿಂದ ನಿರ್ವಹಿಸಲಿದೆ. ಪರಿಸ್ಥಿತಿ ಮತ್ತು ಎದುರಾಗಲಿರುವ ಸವಾಲಿಗೆ ಅನುಗುಣವಾಗಿ ಭದ್ರತಾ ಪಡೆಗಳು ಸನ್ನದ್ಧವಾಗಬೇಕು ಮತ್ತು ತಂತ್ರಜ್ಞಾನದ ಗರಿಷ್ಟ ಬಳಕೆಯಾಗಬೇಕು. ಗಡಿಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 888 ಕೋಟಿ ರೂ. ಮೊತ್ತದ ಗಡಿ ಪ್ರದೇಶ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದವರು ಹೇಳಿದರು. ‌

ಕಳೆದ 1 ವರ್ಷದಲ್ಲಿ ಗಡಿದಾಟಿ ಬಂದ 61 ಡ್ರೋನ್ ಗಳನ್ನು ಬಿಎಸ್ಎಫ್ ಪತ್ತೆಮಾಡಿದೆ. ಗಡಿಭಾಗದಲ್ಲಿ 4 ಸುರಂಗಗಳನ್ನು ಪತ್ತೆಮಾಡಲಾಗಿದೆ. 22 ಒಳನುಸುಳುಕೋರರನ್ನು ಹತ್ಯೆ ಮಾಡಿದ್ದು 632 ಕಿ.ಗ್ರಾಂ ಮಾದಕವಸ್ತು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್ಎಫ್ ಡಿಜಿ ರಾಕೇಶ್ ಅಸ್ತಾನಾ ಹೇಳಿದರು.


SHARE THIS

Author:

0 التعليقات: