Sunday, 18 July 2021

ಮುಂಬೈನಲ್ಲಿ ಭಾರೀ ಮಳೆ: ಕನಿಷ್ಠ 20 ಮಂದಿ ಮೃತ್ಯು,ಭೂಕುಸಿತದಿಂದ ಹಲವರು ಸಿಲುಕಿರುವ ಶಂಕೆ


 ಮುಂಬೈನಲ್ಲಿ ಭಾರೀ ಮಳೆ: ಕನಿಷ್ಠ 20 ಮಂದಿ ಮೃತ್ಯು,ಭೂಕುಸಿತದಿಂದ ಹಲವರು ಸಿಲುಕಿರುವ ಶಂಕೆ

ಮುಂಬೈ: ಮಹಾ ನಗರ ಮತ್ತು ಅದರ ಉಪನಗರಗಳಲ್ಲಿ ಶನಿವಾರ ತಡರಾತ್ರಿ ಹಾಗೂ ರವಿವಾರ ಮುಂಜಾನೆ ಹಲವಾರು ಗಂಟೆಗಳ ಕಾಲ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಮುಂಬೈನ ಚೆಂಬೂರು ಹಾಗೂ  ವಿಕ್ರೋಲಿ ಪ್ರದೇಶಗಳಲ್ಲಿ ತಮ್ಮ ಮನೆಗಳ ಅವಶೇಷಗಳ ಕೆಳಗೆ ಸಿಲುಕಿಕೊಂಡು ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. ನಗರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಜನರು ಮುಕ್ತವಾಗಿ ಹೊರಗೆ ಹೋಗದಂತೆ ಸೂಚಿಸಲಾಗಿದೆ.

ನಗರಪಾಲಿಕೆ ಬಿಎಂಸಿ ಪ್ರಕಾರ ರವಿವಾರ ಬೆಳಿಗ್ಗೆ ವಿಕ್ರೋಲಿ ಪ್ರದೇಶದಲ್ಲಿ ವಸತಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದಾರೆ.

ಚೆಂಬೂರಿನ ಭಾರತ್ ನಗರ ಪ್ರದೇಶದಿಂದ ಹದಿನೈದು ಜನರನ್ನು ಮತ್ತು ವಿಕ್ರೊಲಿಯ ಸೂರ್ಯನಗರದ ಒಂಬತ್ತು ಜನರನ್ನು ರಕ್ಷಿಸಲಾಗಿದೆ.  ಗಾಯಗೊಂಡವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಎರಡೂ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಹೆಚ್ಚಿನ ಜನರು ಮನೆಗಳ ಅವಶೇಷದಡಿ ಸಿಲುಕಿರುವ  ಭಯವಿದೆ ಎಂದು ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಪ್ರಾಣಹಾನಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತಪಟ್ಟವರ ಕುಟುಂಬಗಳಿಗೆ ತಲಾ  2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ರೂ. ನೀಡಲಾಗುವುದು ಎಂದು ಅವರ ಕಚೇರಿ ಟ್ವಿಟರ್‌ನಲ್ಲಿ ತಿಳಿಸಿದೆ.

ಭಾರೀ ಮಳೆಯಿಂದಾಗಿ ಚುನ್ನಭಟ್ಟಿ, ಸಯನ್, ದಾದರ್ ,ಗಾಂಧಿ ಮಾರುಕಟ್ಟೆ, ಚೆಂಬೂರು ಹಾಗೂ ಕುರ್ಲಾ ಎಲ್ ಬಿಎಸ್ ರಸ್ತೆಯ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಉಪನಗರ ಬೊರಿವಲಿ ಪೂರ್ವ ಪ್ರದೇಶದಲ್ಲಿನ ಮಳೆ ನೀರಿನ ರಭಸಕ್ಕೆ ಕಾರುಗಳು ತೇಲುತ್ತಿರುವ ದೃಶ್ಯವನ್ನು ಸುದ್ದಿ ಸಂಸ್ಥೆ ಎಎನ್‌ಐ ಸೆರೆ ಹಿಡಿದಿದೆ.

ದಾದರ್, ಪರೇಲ್, ಕುರ್ಲಾ, ಚುನ್ನಭಟ್ಟಿ, ವಡಾಲ, ಸಯನ್ ಹಾಗೂ ತಿಲಕ್ ನಗರದ ರೈಲು ಹಳಿಗಳಲ್ಲಿ ಮಳೆ ನೀರು ತುಂಬಿಹೋಗಿದೆ.


SHARE THIS

Author:

0 التعليقات: