'ನಿಜ ಜೀವನದಲ್ಲಿ ಹೀರೋ ಆಗಿ' : ನಟ ವಿಜಯ್ ಗೆ ಬುದ್ಧಿವಾದ ಹೇಳಿ 1 ಲಕ್ಷ ದಂಡ ವಿಧಿಸಿದ ಕೋರ್ಟ್
ಚೆನ್ನೈ : ವಿದೇಶದಿಂದ ಆಮದು ಮಾಡಿಕೊಂಡಿದ್ದ ದುಬಾರಿ ಕಾರಿಗೆ ತೆರಿಗೆ ಮನ್ನಾ ಮಾಡುವಂತೆ ಕೋರ್ಟ್ ಮೊರೆ ಹೋಗಿದ್ದ ತಮಿಳು ನಟ ವಿಜಯ್ ಅವರಿಗೆ ಭಾರಿ ಮುಖಭಂಗವಾಗಿದೆ. ಜೊತೆಗೆ ನೀವು ನಿಜ ಜೀವನದಲ್ಲಿ ಹೀರೋ ಆಗಿ ಎಂದು ನ್ಯಾಯಪೀಠ ಕಿವಿ ಮಾತು ಹೇಳಿದೆ.
ನಟ ವಿಜಯ್ ಅವರು ಇಂಗ್ಲೆಂಡ್ ನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಆಮದು ಮಾಡಿಕೊಂಡಿದ್ದರು. ಮದ್ರಾಸ್ ಹೈಕೋರ್ಟ್ಗೆ ವಿಜಯ್ ತೆರಿಗೆ ವಿನಾಯಿತಿ ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನಟನಿಗೆ ಛೀಮಾರಿ ಹಾಕಿದೆ.
2012ರಲ್ಲಿ ನಟ ವಿಜಯ್ ಸಲ್ಲಿಸಿದ್ದ ತೆರಿಗೆ ವಿನಾಯಿತಿಯ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ನ್ಯಾ.ಎಸ್.ಎಮ್.ಸುಬ್ರಮಣಿಯಮ್ ಅವರಿದ್ದ ಪೀಠವು, ನಿಜವಾದ ಹೀರೋಗಳು ಸರಿಯಾದ ಸಮಯಕ್ಕೆ ತೆರಿಗೆ ಕಟ್ಟುತ್ತಾರೆ. ನೀವು ನಿಜ ಜೀವನದ ಹೀರೋಗಳಾಗಿ, ಬರಿಯ ತೆರೆಯ ಮೇಲಿನ ಹೀರೋಗಳಾಗಿ ಉಳಿಯಬೇಡಿ ಎಂದಿದೆ. ಜೊತೆಗೆ ನ್ಯಾಯಾಲಯವು 1ಲಕ್ಷ ರೂ.ಗಳ ದಂಡವನ್ನೂ ವಿಜಯ್ಗೆ ವಿಧಿಸಿದ್ದು, ಅದನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವಂತೆ ತಿಳಿಸಿದೆ.
ವಿಜಯ್ ಅವರ ವರ್ತನೆಯು ಬಹಳ ಜನರನ್ನು ಪ್ರಭಾವಿಸುವ ಸಾಮರ್ಥ್ಯವನ್ನು ಹೊಂದಿದೆ. ತಮಿಳುನಾಡಿನಂತಹ ರಾಜ್ಯದಲ್ಲಿ ಚಿತ್ರ ನಟರು ಬೇರೆಲ್ಲರಿಗಿಂತ ಹೆಚ್ಚು ಜನರನ್ನು ಪ್ರಭಾವಿಸುತ್ತಾರೆ. ನಟರೇ ಹೀಗೆ ಮಾಡಿದರೆ ತಪ್ಪು ಸಂದೇಶ ಹೋದಂತಾಗುತ್ತದೆ. ನಿಜವಾದ ನಾಯಕನಾದವನು ದೇಶಕ್ಕೆ ಕಟ್ಟಬೇಕಾದ ತೆರಿಗೆಯನ್ನು ತಪ್ಪದೇ ಕಟ್ಟುತ್ತಾನೆ ಎಂದಿದೆ.
0 التعليقات: