ಬಾಂಗ್ಲಾ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: 12 ಆರೋಪಿಗಳ ವಿರುದ್ಧ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ
ಬೆಂಗಳೂರು, ಜು.6: ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ 12 ಆರೋಪಿಗಳ ವಿರುದ್ಧ ನಗರದ 1ನೆ ಎಸಿಎಂಎಂ ಕೋರ್ಟ್ ಗೆ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
1,019ಕ್ಕೂ ಹೆಚ್ಚು ಪುಟಗಳ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆಯಾಗಿದ್ದು, 10 ಜನರ ವಿರುದ್ಧ ಅತ್ಯಾಚಾರ ಆರೋಪದಡಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಇಬ್ಬರು ಯುವತಿಯರ ವಿರುದ್ಧ ಅಕ್ರಮ ವಲಸೆ ಆರೋಪದಡಿಯೂ ಸಾಕ್ಷ್ಯಾಧಾರಗಳ ಸಹಿತ ಪ್ರಾಥಮಿಕ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ. ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದ ಘಟನೆಯಡಿ ಮೇ 27ರಂದು ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ದೌರ್ಜನ್ಯ ನಡೆದಿದ್ದು, ಕೇವಲ 5 ವಾರಗಳಲ್ಲೇ ಪ್ರಕರಣದ ಚಾರ್ಜ್ಶೀಟ್ ಸಲ್ಲಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಅರೋಪಿಗಳು ಹಾಗೂ ಸಂತ್ರಸ್ತೆ ಎಲ್ಲರೂ ಬಾಂಗ್ಲಾದೇಶದವರು. ಎಲ್ಲರೂ ಅಕ್ರಮವಾಗಿ ಪಶ್ಚಿಮ ಬಂಗಾಳದ ಮೂಲಕ ದೇಶದೊಳಗೆ ನುಸುಳಿದ್ದರು ಎನ್ನುವುದು ಬಹಿರಂಗವಾಗಿದೆ. ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿ ಮೇಲೆ ಹಲ್ಲೆ ನಡೆಸಿ ಕೃತ್ಯವೆಸಗಿದ್ದಾರೆ. ತನಿಖೆ ವೇಳೆ ಒಟ್ಟು ಮೂವತ್ತಕ್ಕೂ ಹೆಚ್ಚು ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಈ ಪೈಕಿ ಆರು ಜನ ಪ್ರತ್ಯಕ್ಷ ಸಾಕ್ಷಿಗಳಿಂದ 164 ಹೇಳಿಕೆಗಳನ್ನು ದಾಖಲು ಮಾಡಿಸಲಾಗಿದೆ.
ವಿಡಿಯೋದಲ್ಲಿ ಪ್ರಮುಖ ಸಾಕ್ಷಿ ಪತ್ತೆ: ಎಲ್ಲರೂ ಕೃತ್ಯ ನಡೆದ ಸಮಯದಲ್ಲಿ ಒಟ್ಟಿಗೆ ಇದ್ದರು ಎಂಬುದಕ್ಕೆ ವಿಡಿಯೋ ಹಾಗೂ ಮೊಬೈಲ್ ನೆಟ್ವರ್ಕ್ನಿಂದ ಖಚಿತವಾಗಿದೆ. ಎಲ್ಲರೂ ಬಾಂಗ್ಲಾದೇಶದವರೆ ಎಂಬುದಕ್ಕೆ ದಾಖಲೆಗಳು ಲಭ್ಯವಾಗಿದೆ.
ಅರೋಪಿಗಳು ಬಾಂಗ್ಲಾದೇಶದಲ್ಲಿ ಇರುವವರ ಜೊತೆಗೆ ನಿರಂತರ ಫೋನ್ ಸಂಪರ್ಕದಲ್ಲಿದ್ದರು. ಯುವತಿಗೆ ನಡೆಸಿದ್ದ ಮೆಡಿಕಲ್ ಟೆಸ್ಟ್ ಹಾಗೂ ಅರೋಪಿತರಿಗೆ ನಡೆಸಿದ್ದ ಮೆಡಿಕಲ್ ಟೆಸ್ಟ್ ನಲ್ಲಿ ಕೃತ್ಯ ನಡೆದಿರುವುದು ಖಚಿತವಾಗಿದೆ. ಕೂದಲು, ರಕ್ತ, ಉಗುರಿನ ಮಾದರಿಗಳನ್ನು ಕಲೆ ಹಾಕಲಾಗಿತ್ತು. ಕಲೆ ಹಾಕಿದ್ದ ಮಾದರಿಗಳಿಂದಲು ಅತ್ಯಾಚಾರ ನಡೆದಿರುವುದು ಹಾಗೂ ನಡೆಸಿರುವ ಅರೋಪಿಗಳು ಇವರೇ ಎಂಬುದು ಖಚಿತವಾಗಿದೆ.
0 التعليقات: