Sunday, 11 July 2021

ಜೈಪುರ: ಸೆಲ್ಫಿ ತೆಗೆಯುವಾಗ ಸಿಡಿಲು ಬಡಿದು 11 ಮಂದಿ ಮೃತ್ಯು


 ಜೈಪುರ: ಸೆಲ್ಫಿ ತೆಗೆಯುವಾಗ ಸಿಡಿಲು ಬಡಿದು 11 ಮಂದಿ ಮೃತ್ಯು

ಜೈಪುರ: ಜೈಪುರ ಬಳಿಯ 12 ನೇ ಶತಮಾನದ ಅಮರ್ ಪ್ಯಾಲೇಸ್ ಎದುರು ಸಿಡಿಲು ಬಡಿದು  ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ರಾಜಸ್ಥಾನ ರಾಜಧಾನಿಯಲ್ಲಿ ಮಳೆಯ ಮಧ್ಯೆ ಜನರು ವಾಚ್ ಟವರ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಸಿಡಿಲು ಅಪ್ಪಳಿಸಿದಾಗ ವಾಚ್ ಟವರ್‌ನಲ್ಲಿ 10ಕ್ಕೂ ಹೆಚ್ಚು  ಜನರು ಜಮಾಯಿಸಿದ್ದರು. ಭಯಭೀತರಾದ ಜನ ವಾಚ್ ಟವರ್‌ನಿಂದ ಹಾರಿದ್ದರಿಂದ ಹಲವಾರು ಮಂದಿ ಗಾಯಗೊಂಡಿದ್ದಾರೆ. ಘಟನೆ ನಡೆದಾಗ ಇಪ್ಪತ್ತೇಳು ಜನರು ವಾಚ್ ಟವರ್ ಹಾಗೂ  ಕೋಟೆಯ ಗೋಡೆಯ ಮೇಲೆ ಇದ್ದರು ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಾವನ್ನಪ್ಪಿದವರ ಕುಟುಂಬಗಳಿಗೆ ರೂ. 5 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ.

ಅಮರ್ ಅರಮನೆಯಲ್ಲಿ ನಡೆದ ಘಟನೆಯ ಹೊರತಾಗಿ, ರಾಜ್ಯದಾದ್ಯಂತ ರವಿವಾರ ಸಿಡಿಲು ಬಡಿದು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ .  ಬಾರನ್ ಮತ್ತು ಜಹಲಾವರ್‌ನಲ್ಲಿ ತಲಾ ಒಂದು ಸಾವು, ಕೋಟಾ ಜಿಲ್ಲೆಯಲ್ಲಿ ನಾಲ್ಕು ಹಾಗೂ  ಧೋಲ್‌ಪುರ ಜಿಲ್ಲೆಗಳಲ್ಲಿ ಮೂರು ಸಾವುಗಳು ಸಂಭವಿಸಿವೆ. ಸಾವನ್ನಪ್ಪಿದವರಲ್ಲಿ  ಏಳು ಮಕ್ಕಳು ಸೇರಿದ್ದಾರೆ.

ಈ ಸಾವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

"ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಸಿಡಿಲಿನಿಂದಾಗಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜನರ ನಿಧನದಿಂದ ತೀವ್ರವಾಗಿ ದುಃಖಿತನಾಗಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ" ಎಂದು ಪ್ರಧಾನಿ ಕಚೇರಿ (ಪಿಎಂಒ) ಟ್ವೀಟ್ ಮಾಡಿದೆ.

ಇದೇ ವೇಳೆ ಉತ್ತರಪ್ರದೇಶದಲ್ಲಿ ಭಾರೀ ಮಳೆ ಹಾಗೂ ಸಿಡಲಾಘಾತಕ್ಕೆ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಸಾವನ್ನಪ್ಪಿದವರ ಸಂಖ್ಯೆ 37ಕ್ಕೇರಿಕೆಯಾಗಿದೆ. ಪ್ರಯಾಗ್ ರಾಜ್ ಜಿಲ್ಲೆಯೊಂದರಲ್ಲೇ 14 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತ್ರಸ್ತ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.  ಮಳೆ ಸಂಬಂಧಿ ಘಟನೆಗಳಿಂದ ಜೀವನೋಪಾಯ ಕಳೆದುಕೊಂಡವರಿಗೆ ಆರ್ಥಿಕ ನೆರವು ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಾವು ಸಂಭವಿಸಿದೆ. ಸತ್ತವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಪ್ರಯಾಗ್ ರಾಜ್ ನಲ್ಲಿ 14 ಸಾವುಗಳು ಸಂಭವಿಸಿದರೆ, ಕಾನ್ಪುರ ಹಾಗೂ  ಫತೇಪುರ್ ಜಿಲ್ಲೆಗಳಲ್ಲಿ ತಲಾ ಐದು ಸಾವುಗಳು ವರದಿಯಾಗಿವೆ. ಕೌಶಂಬಿಯಲ್ಲಿ, ಸಿಡಿಲಾಘಾತದಿಂದ ನಾಲ್ಕು ಜನರು ಸಾವನ್ನಪ್ಪಿದ್ದರೆ, ಫಿರೋಝಾಬಾದ್, ಉನ್ನಾವೊ ಮತ್ತು ರಾಯ್  ಬರೇಲಿ ಜಿಲ್ಲೆಗಳಲ್ಲಿ ತಲಾ ಎರಡು ಸಾವುಗಳು ವರದಿಯಾಗಿದೆ. ಹಾರ್ಡೋಯಿ ಹಾಗೂ ಝಾನ್ಸಿ ಕೂಡ ತಲಾ ಒಂದು ಸಾವು ವರದಿಯಾಗಿದೆ.SHARE THIS

Author:

0 التعليقات: