Saturday, 10 July 2021

ಮುಂದುವರಿದ ಭಾರೀ ಮಳೆ: ಜುಲೈ 11ರಂದು ಹಲವು ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್'


ಮುಂದುವರಿದ ಭಾರೀ ಮಳೆ:  ಜುಲೈ 11ರಂದು ಹಲವು ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್'

ಬೆಂಗಳೂರು, ಜು.10: ಬಂಗಾಳ ಉಪ ಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಮುಂದುವರೆದಿದ್ದು, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 160 ಮಿ.ಮೀ. ಮಳೆ ದಾಖಲಾಗಿದೆ. ವಾಯುಭಾರ ಕುಸಿತದಿಂದಾಗಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಸಹ ಘೋಷಿಸಲಾಗಿದೆ.

ಇನ್ನು, ಶುಕ್ರವಾರ ತಡರಾತ್ರಿ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ಕಲಬುರಗಿಯಲ್ಲಿ 110 ಮಿ.ಮೀ.,  ಮಂಗಳೂರು, ಸುಬ್ರಹ್ಮಣ್ಯ, ಬೆಳಗಾವಿಯಲ್ಲಿ ತಲಾ 70 ಮಿ.ಮೀ ಮಳೆಯಾಗಿದೆ.

ಇಂದು ರೆಡ್ ಅಲರ್ಟ್: ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜು.14ರವರೆಗೆ ವ್ಯಾಪಕ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ಭಾರೀ ಮಳೆ ಮುನ್ಸೂಚನೆ ಇರುವುದರಿಂದ ಜು.11ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಜು.12 ಮತ್ತು 13 ರಂದು ಆರೇಂಜ್ ಅಲರ್ಟ್ ಹಾಗೂ ಜು.14 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಬಿಜಾಪುರ, ಯಾದಗಿರಿ, ರಾಯಚೂರು, ಬೀದರ್, ಕಲಬುರಗಿ ಹಾಗೂ ಚಾಮರಾಜನಗರದಲ್ಲಿ ಭಾರೀ ಮಳೆ ನಿರೀಕ್ಷಿಸಿರುವುದರಿಂದ ಜು.14ರವರೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳವರೆಗೆ ಸಾಧಾರಣ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಒಳಹರಿವು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಭಾರೀ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಲಾಶಯಗಳು ತುಂಬುತ್ತಿವೆ. ರಾಜ್ಯದ 13 ಜಲಾಶಯಗಳು 860 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಜು.10 ರೊಳಗೆ 381 ಟಿಎಂಸಿ ನೀರು ಸಂಗ್ರಹವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ 44 ಟಿಎಂಸಿ ನೀರು ಹೆಚ್ಚಾಗಿ ಸಂಗ್ರಹವಾಗಿದೆ. ಎಲ್ಲಾ ಜಲಾಶಯಗಳಿಗೆ 31850 ಕ್ಯೂಸಕ್ ನೀರು ಹರಿದು ಬರುತ್ತಿದ್ದು, 16527 ಕ್ಯೂಸಕ್ ನೀರು ಹೊರ ಬಿಡಲಾಗುತ್ತಿದೆ.SHARE THIS

Author:

0 التعليقات: