Saturday, 17 July 2021

ಗಾಂಜಾ ಮಾರಾಟ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ, 1 ಲಕ್ಷ ರೂ. ದಂಡ


ಗಾಂಜಾ ಮಾರಾಟ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ, 1 ಲಕ್ಷ ರೂ. ದಂಡ

ಮಂಗಳೂರು, ಜು.17: ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಗಾಂಜಾ ಮಾರಾಟ ಆರೋಪ ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಲಯ (ವಿಶೇಷ ನ್ಯಾಯಾಲಯ)ದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ, 1ಲಕ್ಷ ರೂ. ದಂಡ ಕಟ್ಟಲು ನ್ಯಾಯಾಲಯ ತೀರ್ಪು ನೀಡಿದೆ.ಬಂಟ್ವಾಳ ಉರಿಮಜಲು ನಿವಾಸಿ ಅಬ್ದುಲ್ ರಹೀಂ (29) ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣ ವಿವರ: ನಗರದ ಕುಳೂರು ಇಂಜಿನಿಯರಿಂಗ್ ಕಾಲೇಜೊಂದರ ಸಮೀಪ 2018ರ ಸೆಪ್ಟಂಬರ್ 8ರಂದು ಅಬ್ದುಲ್ ರಹೀಂ, ರಾಜೀವ್ ಎ.ಪಿ., ಶಾಫಿ ಕಲಂದರ್ ಎಂಬವರು ರಿಕ್ಷಾ ಮತ್ತು ಬೈಕ್‌ನಲ್ಲಿಟ್ಟು ಗಾಂಜಾ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಾವೂರು ಇನ್‌ಸ್ಪೆಕ್ಟರ್ ಕೆ.ಆರ್. ನಾಯ್ಕೆ ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಶಾಫಿ ಕಲಂದರ್ ಬೈಕ್ ಬಿಟ್ಟು ಪರಾರಿಯಾದರೆ, ರಿಕ್ಷಾದಲ್ಲಿದ್ದ ಅಬ್ದುಲ್ ರಹೀಂ ಮತ್ತು ರಾಜೀವ್ ಎ.ಪಿ. ಎಂಬವರನ್ನು ಬಂಧಿಸಲಾಗಿತ್ತು. ಬೈಕ್ ಮಾಲಕ ರಫೀಕ್ ಮಂಡಿಯೂರು ಕೂಡ ಪೊಲೀಸರಿಗೆ ಸಿಗದೆ ಪರಾರಿಯಾಗಿದ್ದರು. ಆರೋಪಿಗಳಿಂದ 42 ಕೆಜಿ 230 ಗ್ರಾಂ ಗಾಂಜಾ, ಅಟೋ ರಿಕ್ಷಾ, ಬೈಕ್‌ಗಳನ್ನು ಮುಟ್ಟುಗೋಲು ಹಾಕಲಾಗಿತ್ತು. ಆರೋಪಿಗಳು ವಾಣಿಜ್ಯ ಉದ್ದೇಶಕ್ಕಾಗಿ ಈ ಗಾಂಜಾ ವಹಿವಾಟು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಕರಣದ ಬಗ್ಗೆ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ನ್ಯಾಯಾಲಯ)ದ ನ್ಯಾಯಾಧೀಶರಾದ ಮುರಳೀಧರ ಪೈ ಬಿ. ಸಮಗ್ರ ವಿಚಾರಣೆ ನಡೆಸಿ ಆರೋಪ ಸಾಬೀತುಪಡಿಸಿ ಅಪರಾಧಿ ಅಬ್ದುಲ್ ರಹೀಂಗೆ ಎನ್‌ಡಿಪಿಎಸ್ ಕಾಯ್ದೆಯಡಿ 10 ವರ್ಷಗಳ ಕಠಿಣ ಜೈಲುವಾಸ ಹಾಗೂ 1ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 1ವರ್ಷ ಹೆಚ್ಚುವರಿಯಾಗಿ ಸಾದಾ ಶಿಕ್ಷೆ ಅನುಭವಿಸಬೇಕಿದೆ.

ಪ್ರಕರಣದ ವಿಚಾರಣೆ ಬಳಿಕ ಕಾವೂರು ಇನ್‌ಸ್ಪೆಕ್ಟರ್ ಕೆ.ಎಂ. ರಫೀಕ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ರಾಜು ಪೂಜಾರಿ ಬನ್ನಾಡಿ ಹಾಗೂ ಶೇಖರ್ ಶೆಟ್ಟಿ ವಾದಿಸಿದ್ದರು.

ಪ್ರತ್ಯೇಕ ಕೇಸು ವಿಚಾರಣೆ: ಗಾಂಜಾ ಮಾರಾಟ ಪ್ರಕರಣದಲ್ಲಿ ಅಬ್ದುಲ್ ರಹೀಂ, ರಾಜೀವ್ ಎ.ಪಿ., ಶಾಫಿ ಕಲಂದರ್, ರಫೀಕ್ ಮಂಡಿಯೂರು ವಿರುದ್ಧ ಪ್ರಕರಣ ದಾಖಲಾಗಿದ್ದು, ಅಬ್ದುಲ್ ರಹೀಂನ ಕೇಸು ಮಾತ್ರ ವಿಚಾರಣೆಯಾಗಿ ಶಿಕ್ಷೆ ಪ್ರಕಟವಾಗಿದೆ. ಉಳಿದಂತೆ ರಾಜೀವ್ ಎ.ಪಿ. ವಿಚಾರಣೆ ಆರಂಭದಲ್ಲಿ ಕೋರ್ಟ್‌ಗೆ ಹಾಜರಾಗಿದ್ದು, ಕೆಲ ಸಮಯದಲ್ಲಿ ಮೃತಪಟ್ಟಿದ್ದರು. ರಫೀಕ್ ಮಂಡಿಯೂರಿ ನಾಪತ್ತೆಯಾಗಿದ್ದಾನೆ. ಶಾಫಿ ಕಲಂದರ್ ಪರಾರಿಯಾಗಿದ್ದು, ಕೆಲವು ದಿನಗಳ ಹಿಂದೆ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ತೀರ್ಪು ಪ್ರಕಟವಾದ ಕಾರಣ ಕೇಸು ವಿಭಜಿಸಿ ಕೋರ್ಟ್ ವಿಚಾರಣೆ ಮುಂದುವರಿಯಲಿದೆ.


 


SHARE THIS

Author:

0 التعليقات: