ರಾಷ್ಟ್ರಪತಿ ಕೋವಿಂದ್ ಭೇಟಿ ಕಾರಣದಿಂದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಮಹಿಳೆ ಮೃತ್ಯು: ಕ್ಷಮೆ ಯಾಚಿಸಿದ ಪೊಲೀಸರು
ಲಕ್ನೋ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರ ಉತ್ತರಪ್ರದೇಶ ಭೇಟಿಯ ಕಾರಣದಿಂದಾಗಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ಕಾರಣ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪದೇ ಮಹಿಳೆಯೋರ್ವರು ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಕುಟುಂಬಸ್ಥರ ಕ್ಷಮೆ ಯಾಚಿಸಿದ್ದಾರೆಂದು ವರದಿಗಳು ತಿಳಿಸಿವೆ.
ರಾಷ್ಟ್ರಪತಿ ಕೋವಿಂದ್ ಮೂರು ದಿನಗಳ ಉತ್ತರಪ್ರದೇಶ ಭೇಟಿಯಲ್ಲಿದ್ದು, ತಮ್ಮ ಮೂಲ ಗ್ರಾಮಕ್ಕೆ ಅವರು ತೆರಳಲು ಮಧ್ಯರಾತ್ರಿ ರೈಲಿನಲ್ಲಿ ಆಗಮಿಸಿದ್ದರು. ಮೃತಪಟ್ಟ 50ರ ಹರೆಯದ ಮಹಿಳೆ ವಂದನಾ ಮಿಶ್ರಾ ಎಂಬವರು ಕಾನ್ಪುರದ ಇಂಡಿಯನ್ ಅಸೋಸೊಯೇಶನ್ ಆಫ್ ಇಂಡಸ್ಟ್ರೀಸ್ ನ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದರು ಎಂದು ತಿಳಿದು ಬಂದಿದೆ.
ಅವರು ರೋಗಪೀಡಿತರಾದ ಕಾರಣದಿಂದ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ ಕೋವಿಂದ್ ರ ಆಗಮನ ಕಾರಣದಿಂದ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದರು ಎನ್ನಲಾಗಿದೆ. ಮಿಶ್ರಾ ಅವರು ಈಗಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದರು ಎನ್ನಲಾಗಿದೆ.
"ಕಾನ್ಪುರ ಪೊಲೀಸರ ಮತ್ತು ನಮ್ಮ ಪರವಾಗಿ ವಂದನಾ ಮಿಶ್ರಾರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದೇವೆ. ಇದು ನಮಗೆ ಭವಿಷ್ಯಕ್ಕೆ ದೊಡ್ಡದೊಂದು ಪಾಠವಾಗಲಿದೆ. ಇಂತಹಾ ಪ್ರಕರಣಗಳು ಇನ್ನು ಮುಂದೆ ಮರುಕಳಿಸದಂತೆ ನೋಡಿಕೊಳ್ಳಲು ನಾವು ಪ್ರತಿಜ್ಞೆ ಕೈಗೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾಗಿ ವರದಿ ತಿಳಿಸಿದೆ.
0 التعليقات: