ದೇಶದ ಎಲ್ಲ ಜನರಿಗೂ ಕೇಂದ್ರ ಸರಕಾರದಿಂದ ಉಚಿತ ಲಸಿಕೆ: ಪ್ರಧಾನಿ ಮೋದಿ
ದೀಪಾವಳಿಯ ತನಕ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ
ಹೊಸದಿಲ್ಲಿ: ಲಸಿಕೆ ವಿತರಣೆಗೆ 'ಮಿಷನ್ ಇಂದ್ರಧನುಷ್' ಆರಂಭಿಸಲಾಗಿದೆ. ಕೆಲ ರಾಜ್ಯಗಳಿಂದ ಲಸಿಕೆ ಕೆಲಸ ವಿಕೇಂದ್ರಿಕರಣಕ್ಕೆ ಒತ್ತಾಯ ಕೇಳಿಬಂದಿದ್ದು ರಾಜ್ಯಗಳಿಗೆ ಈಗ ಸಮಸ್ಯೆ ಏನೆಂದು ಗೊತ್ತಾಗಿದೆ. ಇನ್ನು ಮುಂದೆ ಕೇಂದ್ರ ಸರಕಾರವೇ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ಪೂರೈಸಲಿದೆ. ಮುಂದಿನ 2 ವಾರಗಳ ಬಳಿಕ ಕೇಂದ್ರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ. ಲಸಿಕಾಕರಣದ ರಾಜ್ಯಗಳ ಶೇ.25ರಷ್ಟು ಭಾಗವನ್ನೂ ಭಾರತ ಸರಕಾರವೇ ವಹಿಸಿಕೊಂಡಿದ್ದು, ಮುಂದಿನ ಎರಡು ವಾರಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೇರಿಕೊಂಡು ಹೊಸ ಮಾರ್ಗಸೂಚಿ ಅನುಸರಿಸಬೇಕಿದೆ ಎಂದು ಸೋಮವಾರ ಸಂಜೆ ದೇಶವನ್ನುದ್ದೇಶಿಸಿ ಮಾಡಿರುವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಬಡವರು ಉಪವಾಸದಿಂದ ಮಲಗಬಾರದು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ದೀಪಾವಳಿಯ ತನಕ ದೇಶದ 80 ಕೋಟಿ ಬಡ ನಾಗರಿಕರಿಗೆ ಉಚಿತ ಆಹಾರ ಧಾನ್ಯ ನೀಡಲಾಗುವುದು ಎಂದು ಮೋದಿ ಘೋಷಿಸಿದ್ದಾರೆ.
ಶೇ.25ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಖರೀದಿ ಮಾಡಬಹುದು. ಖಾಸಗಿ ಆಸ್ಪತ್ರೆಗಳಲ್ಲಿ ರೂ.150 ಮಾತ್ರ ಸೇವಾ ಶುಲ್ಕ ಇರಲಿದೆ. ದೇಶಾದ್ಯಂತ ಲಸಿಕೆ ನೀಡಿಕೆ ವೇಗವಾಗಿ ನಡೆಯುತ್ತಿದೆ. ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಸರಕಾರ ಪ್ರಯತ್ನಿಸುತ್ತಿದೆ. ದೇಶದ 130 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡುವುದು ದೊಡ್ಡ ಸವಾಲಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ಲಸಿಕೆ ನೀಡಿಕೆ ನಿಧಾನಗತಿಯಲ್ಲಿದೆ. 23 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ. ಲಸಿಕೆಯು ಕೊರೋನ ವಿರುದ್ಧ ಹೋರಾಟದಲ್ಲಿ ಏಕೈಕ ಅಸ್ತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೊರೋನ ಈ ಶತಮಾನದ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗ. ಆಧುನಿಕ ಜಗತ್ತು ಈ ಹಿಂದೆಂದೂ ಇಂತಹ ಸಂಕಷ್ಟ ಎದುರಿಸಿರಲಿಲ್ಲ. ಕೊರೋನ ಇಡೀ ಜಗತ್ತನೇ ಕಂಗೆಡಿಸಿದೆ. ಭಾರತ ಶಕ್ತಿಮೀರಿ ಕೊರೋನ ವಿರುದ್ಧ ಹೋರಾಡಿದೆ. ಕೊರೋನದಿಂದಾಗಿ ನಮ್ಮ ಜೊತೆಗಿದ್ದ ಹಲವರನ್ನು ಕಳೆದುಕೊಂಡಿದ್ದೇವೆ. ಹೊಸ ಆರೋಗ್ಯ ಸೌಕರ್ಯ ಮಾಡಲಾಗಿದೆ. ರೈಲು, ವಿಮಾನಗಳ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಕೊರೋನ ರೂಪಾಂತರಿ ಅದೃಶ್ಯ ವೈರಿಯಾಗಿದೆ. ನಮ್ಮ ದೇಶದಲ್ಲಿ ಲಸಿಕೆ ಉತ್ಪಾದನೆ ಮಾಡಿದ್ದರಿಂದ ಕೆಲವು ಜೀವ ಉಳಿದಿದೆ. ವಿದೇಶದಲ್ಲಿ ಲಸಿಕೆ ಉತ್ಪಾದನೆ ಯಾದರೂ ನಮಗೆ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ.
0 التعليقات: